ಸ್ಥಳೀಯನನ್ನು ಸೇನಾ ಜೀಪಿಗೆ ಕಟ್ಟಲು ಕಾರಣ ವಿವರಿಸಿದ ಗೊಗೋಯ್

ಶ್ರೀನಗರ: ವ್ಯಕ್ತಿಯೊಬ್ಬನನ್ನು ಸೇನಾ ಜೀಪಿಗೆ ಕಟ್ಟಿ ಮಾನವ ರಕ್ಷಾ ಕವಚವನ್ನಾಗಿ ಬಳಸಿಕೊಂಡಿದ್ದಕ್ಕಾಗಿ ಕೆಲವರು ವಿರೋಧಿಸುತ್ತಿರುವ ನಡುವೆಯೇ, ಈ ಕೆಲಸ ಮಾಡಿದ ಮೇಜರ್ ನಿತಿನ್ ಗೊಗೋಯ್ ಅವರು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಂದ ಸನ್ಮಾನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮೇಜರ್ ಗೊಗೋಯ್ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿ ಆ ಸಂದರ್ಭದಲ್ಲಿ ಹಲವರ ಜೀವ ರಕ್ಷಿಸಲೆಂದೇ ಹಾಗೆ ಮಾಡಬೇಕಾಗಿ ಬಂತು ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಏಪ್ರಿಲ್ 9 ರಂದು ಲೋಕಸಭಾ ಸ್ಥಾನಕ್ಕಾಗಿ ನಡೆದ ಉಪಚುನಾವಣೆ ವೇಳೆ ಅಲ್ಲಿನ ಸ್ಥಳೀಯರು ಹಿಂಸೆಗೆ ಮುಂದಾಗಿದ್ದರು. ಆ ಸಮಯದಲ್ಲಿ ಫರೂಖ್ ಅಹಮದ್ ಎಂಬ ವ್ಯಕ್ತಿಯನ್ನು ಮೇಜರ್ ಗೊಗೋಯ್ ಜೀಪ್ ಮುಂಭಾಗದಲ್ಲಿ ಕಟ್ಟಿ ಮಾನವ ರಕ್ಷಾ ಕವಚದಂತೆ ಬಳಸಿಕೊಂಡಿದ್ದರು. ಆ ಸಮಯದಲ್ಲಿ 1,200 ಕ್ಕೂ ಹೆಚ್ಚು ಪ್ರತಿಭಟನಾಕಾರರು ಐಟಿಬಿಪಿ ಸಿಬ್ಬಂದಿ ಮತ್ತು ಚುನಾವಣಾ ಕಾರ್ಯಕ್ಕೆ ಹಾಜರಾಗಿದ್ದ ಸಿಬ್ಬಂದಿಯನ್ನು ಸುತ್ತುವರೆದು ಕಲ್ಲೆಸೆದು, ಮತದಾನ ಕೇಂದ್ರಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಹೆದರಿಸಿದರು ಎಂದು ಗೊಗೋಯ್ ಹೇಳಿದ್ದಾರೆ. ತಾವು ಹೋಗಿ ಅವರನ್ನೆಲ್ಲಾ ಪ್ರತಿಭಟನಾಕಾರರಿಂದ ರಕ್ಷಿಸಿದ್ದೇವೆ. ಆಗ ಫೈರಿಂಗ್ ಗೆ ಅನುಮತಿ ನೀಡಿದ್ದೇ ಆದಲ್ಲಿ ಕನಿಷ್ಟ 12 ಜನರಾದರೂ ಸಾವನ್ನಪ್ಪುತ್ತಿದ್ದರು ಎಂದು ಅವರು ವಿವರಿಸಿದರು.

ಗೊಗೋಯ್ ಕ್ರಮವನ್ನು ಮಾಜಿ ಸೇನಾಧಿಕಾರಿಗಳು ಪ್ರಶಂಸಿಸಿದ್ದಾರೆ. ಆಪತ್ತಿನ ಸಂದರ್ಭದಲ್ಲಿ ಗೊಗೋಯ್ ಸಮಯಸ್ಪೂರ್ತಿ ಮೆರೆದಿದ್ದಾರೆ, ಕಲ್ಲೆಸೆಯುತ್ತಿದ್ದ ಪ್ರತಿಭಟನಾಕಾರರಿಂದ ನಾಗರಿಕರು, ಸೈನಿಕರು ಮತ್ತು ಪೋಲಿಂಗ್ ಬೂತ್ ಅಧಿಕಾರಿಗಳನ್ನು ರಕ್ಷಿಸಿದ್ದಾರೆ, ಅವರ ನಡೆ ತಪ್ಪು ಎನ್ನುವವರಿಗೆ ನಾಚಿಕೆಯಾಗಬೇಕು ಎಂದು ಪಿಕೆ ಸೆಹಗಲ್ ಅಭಿಪ್ರಾಯಪಟ್ಟಿದ್ದಾರೆ.