ಗಿಫ್ಟ್ ಕೇಳಿದ್ದಕ್ಕೆ ವಿಚ್ಛೇದನ ನೀಡಿದ ಪಾಕ್ ಕ್ರಿಕೆಟಿಗ

ವಿವಿಧ ರೀತಿಯ ವಿಚಿತ್ರ ಕಾರಣಗಳಿಗಾಗಿ ವಿಚ್ಛೇದನ ನೀಡುವುದನ್ನು ಕೇಳಿದ್ದೇವೆ. ಇದೀಗ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ವಿರುದ್ಧ ಆತನ ಮಾಜಿ ಪತ್ನಿ ಅಂತದ್ದೇ ಅರೋಪ ಮಾಡಿದ್ದಾರೆ. ಕಳೆದ ವರ್ಷ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಉಡುಗೊರೆ ಕೇಳಿದ್ದಕ್ಕೆ ಉಡುಗೊರೆ ಬದಲು ವಿಚ್ಛೇದನ ನೀಡಿದ್ದಾರೆ ಎಂದು ಆಕೆ ಪಾಕ್ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ನವೆಂಬರ್ 2 ರಂದು ಇಸ್ಲಾಮಾಬಾದಿನಲ್ಲಿ ರ‌್ಯಾಲಿ ನಡೆಸುವುದಾಗಿ ಇಮ್ರಾನ್ ಖಾನ್ ಘೋಷಿಸಿದ ಬೆನ್ನಲ್ಲೇ ಆತನ ಪತ್ನಿ ರೆಹಮ್ ಈ ಆರೋಪ ಮಾಡಿರುವುದು ಮಹತ್ವ ಪಡೆದಿದೆ. ತನಗೆ ಮಾಡಿದಂತೆ ಮತ್ತೊಮ್ಮೆ ಯಾರಿಗೂ ಮಾಡಬಾರದು ಎಂದು ಪ್ರಾರ್ಥಿಸುತ್ತಿರುವುದಾಗಿ ಹೇಳಿದ ಆಕೆ, ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನ ಗಿಫ್ಟ್ ಕೊಡಬೇಕೆಂದು ಜೋಕ್ ಮಾಡಿದ್ದಕ್ಕೆ ಆತ ಡೈವೋರ್ಸ್ ನೀಡಿದರೆಂದು ರೆಹಮ್ ಹೇಳಿದ್ದಾರೆ.

ಇಂಗ್ಲೆಂಡ್ ನ ಜೆಮಿಮಾ ಗೋಲ್ಡ್ ಸ್ಮಿತ್ ರವರನ್ನು ಮೊದಲು ಮದುವೆಯಾಗಿದ್ದ ಇಮ್ರಾನ್, 2004 ರಲ್ಲಿ ಆಕೆಗೆ ಡೈವೋರ್ಸ್ ನೀಡಿದ್ದ. ಇವರಿಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಎರಡು ವರ್ಷದ ಹಿಂದೆ ಪತ್ರಕರ್ತೆ ರೆಹಮ್ ರನ್ನು ಎರಡನೇ ಮದುವೆಯಾಗಿದ್ದ ಇಮ್ರಾನ್ ಮದುವೆಯಾದ 10 ತಿಂಗಳಿಗೇ ವಿಚ್ಛೇದನ ನೀಡಿದ್ದಾರೆ.