ವಿದ್ಯಾರ್ಥಿಯನ್ನು ಕೊಂದು ತಿಂದರೆಂದು ನೈಜೀರಿಯನ್ನರ ಮೇಲೆ ದಾಳಿ

ಗ್ರೇಟರ್ ನೋಯ್ಡಾದಲ್ಲಿ ವಿದ್ಯಾರ್ಥಿಯೊಬ್ಬನ ಸಾವು ಸಂಚಲನ ಸೃಷ್ಟಿಸಿದೆ. ಎನ್‌ಎಸ್‌ಜಿ ಬ್ಲಾಕ್ ಕ್ಯಾಟ್ ಎನ್‌ಕ್ಲೇವ್ ನಲ್ಲಿ ವಾಸಿಸುತ್ತಿರುವ 12 ನೆ ತರಗತಿ ವಿದ್ಯಾರ್ಥಿ ಮನೀಶ್ ಖಾತ್ರಿ ಕಳೆದ ಶುಕ್ರವಾರ ರಾತ್ರಿ ಮನೆಯಿಂದ ಹೊರಗೆ ಹೋದವನು ವಾಪಸಾಗದಿದ್ದುದು ಪೋಷಕರಲ್ಲಿ ಆತಂಕ ಮೂಡಿಸಿತ್ತು. ಅದೇ ರಸ್ತೆಯಲ್ಲಿ ಸ್ವಲ್ಪ ದೂರದ ಮನೆಯಲ್ಲಿ ವಾಸಿಸುತ್ತಿರುವ ನೈಜೀರಿಯಾ ವಿದ್ಯಾರ್ಥಿಗಳೊಂದಿಗೆ ಮನೀಶ್ ನನ್ನು ಕೊನೆಯ ಬಾರಿಗೆ ನೋಡಿದ್ದಾಗಿ ಕೆಲವರು ಹೇಳಿದ್ದರಿಂದ, ನೈಜರೀಯಾ ವಿದ್ಯಾರ್ಥಿಗಳ ಮನೆ ಬಳಿ ಗುಂಪು ಸೇರಿದ ಸ್ಥಳೀಯರು ಮನೀಶ್ ಗಾಗಿ ಹುಡುಕಾಡಿದರು. ಆತ ಅಲ್ಲಿಲ್ಲದಿದ್ದರಿಂದ ನೈಜೀರಿಯಾ ವಿದ್ಯಾರ್ಥಿಗಳೇ ಮನೀಶ್ ನನ್ನು ಕೊಂದು ತಿಂದಿದ್ದಾರೆಂದು ಸ್ಥಳೀಯರು ಭಾವಿಸಿ ನೈಜೀರಿಯನ್ನರ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ ಈ ಘಟನೆ ನಡೆದ ಸ್ವಲ್ಪ ಸಮಯಕ್ಕೆ ಅಧಿಕ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿದ್ದ ಸ್ಥಿತಿಯಲ್ಲಿ ಮನೀಶ್ ಮನೆಗೆ ವಾಪಸಾಗಿದ್ದಾನೆ. ಡ್ರಗ್ಸ್ ಸೇವಿಸಿದ ಕಾರಣದಿಂದಲೇ ಆತ ಶನಿವಾರ ಸಾವನ್ನಪ್ಪಿದ. ವಿಚಾರಣೆ ವೇಳೆ ನೈಜೀರಿಯನ್ನರ ಕೈವಾಡವಿಲ್ಲ ಎಂಬುದು ತಿಳಿದು ಬಂದು ಅವರನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ಕೊಲೆ ಆರೋಪವನ್ನು ಖಂಡಿಸಿ ಆಪ್ರಿಕನ್ ವಿದ್ಯಾರ್ಥಿ ಸಂಘಟನೆಗಳು ಕಸ್ನಾ ಪೊಲೀಸ್ ಠಾಣೆಯ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. ದಾಳಿಯ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗಮನಕ್ಕೆ ಕೊಂಡೊಯ್ದಾಗ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು. ಈ ಘಟನೆಗೆ ಸಂಬಂಧಿಸಿದಂತೆ ಲಲೀಸರು 54 ಜನ ಆರೋಪಿಗಳನ್ನು ಗುರುತಿಸಿದ್ದು, ಐವರನ್ನು ಬಂಧಿಸಿದ್ದಾರೆ.