ಆಸ್ಟ್ರೇಲಿಯಾಕ್ಕೆ ಕಳಪೆ ದಾಖಲೆಯ ಭಯ

ಒಂದು ಕಾಲದಲ್ಲಿ ಸತತ ಗೆಲುವುಗಳಿಂದ ಬೀಗುತ್ತಿದ್ದ ಆಸ್ಟ್ರೇಲಿಯ ಕ್ರಿಕೆಟ್ ತಂಡ, ಈಗ ತೀವ್ರ ಒತ್ತಡ ಎದುರಿಸುತ್ತಿದೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಸ್ವದೇಶದಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಆಸ್ಟ್ರೇಲಿಯಾ, ಎರಡನೇ ಟೆಸ್ಟ್ ಪಂದ್ಯದಲ್ಲೂ ಕೂಡಾ ಸೋತರೆ ಕಳಪೆ ದಾಖಲೆಯನ್ನು ತನ್ನದಾಗಿಸಿಕೊಳ್ಳುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಸೋಲಿನ ನಂತರ ಸತತ ನಾಲ್ಕನೇ ಪಂದ್ಯವನ್ನೂ ಸೋಲುವ ಭಯ ಆಸಿಸ್ ತಂಡಕ್ಕೆ. ಅದಕ್ಕೂ ಮುನ್ನ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸತತ ಮೂರು ಸೋಲುಗಳನ್ನು ಕಂಡಿತ್ತು.

ಮೂರು ವರ್ಷಗಳ ಹಿಂದೆ ಭಾರತದಲ್ಲಿ ಭಾರತದ ವಿರುದ್ಧ ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಸೋತಿತ್ತು. ಅದಾದ ನಂತರ ಅಷ್ಟು ಕೆಟ್ಟ ಪ್ರದರ್ಶನ ನೀಡುತ್ತಿರುವುದು ಇದೇ ಮೊದಲು. ಹೀಗಾಗಿ ಸತತ ಸೋಲುಗಳ ದಾಖಲೆಯಿಂದ ತಪ್ಪಿಸಿಕೊಳ್ಳಲು ಅಸಿಸ್ ಪ್ರಯತ್ನಿಸುತ್ತಿದೆ. ಮತ್ತೊಂದು ಕಡೆ ಸ್ಟೀವ್ ಸ್ಮಿತ್ ನಾಯಕತ್ವದ ಕುರಿತು ಟೀಕೆಗಳು ಕೇಳಿ ಬರುತ್ತಿವೆ. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಆ ದೇಶದ ವಿರುದ್ಧ ನಡೆದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವೈಟ್ ವಾಷ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರದಿಂದ ಹೊಬಾರ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲು ತೀವ್ರ ಕಸರತ್ತು ನಡೆಸಿದೆ.