ಸ್ಮಶಾನದಲ್ಲಿ ಹೂತಿಟ್ಟು ಹೋದ ಮಗು ಬದುಕಿ ಬಂದಾಗ!

ಇಂದೋರ್: ಸಾವನ್ನಪ್ಪಿದೆ ಎಂದು ಭಾವಿಸಿ ಹತ್ತು ದಿನಗಳ ಮಗುವನ್ನು ಯಾರೋ ಸ್ಮಶಾನದಲ್ಲಿ ಹೂತಿಟ್ಟು ಹೋಗಿದ್ದರು. ಹಾಗೆ ಹೂತಿಟ್ಟು ಹೋಗಿ ಎಷ್ಟು ಸಮಯವಾಗಿತ್ತೋ ಸರಿಯಾಗಿ ತಿಳಿದು ಬಂದಿಲ್ಲವಾದರೂ, ಸಮೀಪದಲ್ಲಿ ಆಟವಾಡುವ ಮಕ್ಕಳು ಹೂತಿಟ್ಟಿದ್ದ ಮಗುವಿನ ಅಳಲು ಕೇಳಿ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದರು. ಸಮಯಕ್ಕೆ ಗ್ರಾಮದ ಓರ್ವ ದಂಪತಿ  ಬಂದಿದ್ದರಿಂದ ಮಗು ಜೀವಂತವಾಗಿ ಹೊರಬಿದ್ದಿದೆ.

ಹೌದು ಈ ಘಟನೆ ಮಧ್ಯಪ್ರದೇಶದ ಬರ್ವಾನಿ ಸಮೀಪ ನಡೆದಿದೆ. ಘುಸ್ ಗ್ರಾಮದ ಸ್ಮಶಾನದಲ್ಲಿ ಹತ್ತು ದಿನಗಳ ಗಂಡು ಮಗುವನ್ನು ಒಂದಡಿ ಆಳದ ಗುಂಡಿಯಲ್ಲಿ ಹೂತು ಪೋಷಕರು ಹೊರಟು ಹೋಗಿದ್ದರು. ಮಂಗಳವಾರ ಕೆಲ ಮಕ್ಕಳು ಮಗುವನ್ನು ಹೂತಿಟ್ಟ ಸ್ಥಳದಲ್ಲಿ ಆಟವಾಡುತ್ತಿದ್ದರು. ಆಗ ಗುಂಡಿಯಲ್ಲಿನ ಮಗು ಆಕ್ರಂದನ ಕೇಳಿಸಿದೆ. ಕೂಡಲೇ ಮಕ್ಕಳು ಊರಿನವರಿಗೆ ತಿಳಿಸಿದ್ದರು. ಶೇರ್ ಸಿಂಗ್ (32) ಎಂಬ ವ್ಯಕ್ತಿ ಪತ್ನಿ ಸುನಿತಾಳೊಂದಿಗೆ ಅಲ್ಲಿಗೆ ಬಂದು ಮಣ್ಣು ಸರಿಸಿ ಮಗುವನ್ನು ತಮ್ಮ ಮನೆಗೆ ಹೊತ್ತೊಯ್ದಿದ್ದರು.

ಸುದ್ದಿ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವನ್ನು ಆಸ್ಪತ್ರೆ ದಾಖಲಿಸಿದ್ದು, ಹತ್ತು ದಿನಗಳ ಮಗುವನ್ನು ಇರುವೆಗಳು ಕಚ್ಚಿದ್ದರಿಂದ ಸ್ವಲ್ಪ ಗಾಯಗೊಂಡಿದೆ. ಸದ್ಯ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೂತಿಟ್ಟ ಮಗು ಹೇಗೆ ಬದುಕುಳಿದಿದೆ ಎಂಬುದು ಆಶ್ಚರ್ಯವಾಗಿದೆ. ಮಗುವನ್ನು ಹಿಂದಿನ ರಾತ್ರಿ ಅಥವಾ ಸೋಮವಾರ ಮುಂಜಾನೆ ಹೂತಿಟ್ಟರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ.

ತಮಗೆ ಮೂವರು ಹೆಣ್ಣು ಮಕ್ಕಳಿದ್ದು, ಈ ಗಂಡು ಮಗುವನ್ನು ದೇವರೇ ತಮಗೆ ನೀಡಿದ್ದಾನೆ ಎಂದು ಭಾವಿಸಿರುವ ಶೇರ್ ಸಿಂಗ್ ದಂಪತಿಗಳು, ಮಗುವನ್ನು ಕರೆದೊಯ್ಯಲು ಆಸ್ಪತ್ರೆ ಬಳಿಯೇ ಕಾಯುತ್ತಿದ್ದಾರೆ. ತಾವೇ ಆ ಮಗುವನ್ನು ಸಾಕಿಕೊಳ್ಳುತ್ತೇವೆ ಎಂದು ಅಧಿಕಾರಿಗಳನ್ನು ಬೇಡಿಕೊಳ್ಳುತ್ತಿದ್ದಾರೆ.