ಸ್ಮಾರ್ಟ್ ಫೋನ್ ಗೆ ಹತ್ತಿರವಾದಷ್ಟೂ ಬುದ್ದಿ ಮಟ್ಟ ಕಡಿಮೆ

ಅಮೆರಿದ ಟೆಕ್ಸಾಸ್ ನಲ್ಲಿನ ಮೆಕ್ಯಾಂಬ್ಸ್ ಸ್ಕೂಲ್ ಆಫ್ ಬ್ಯುಸಿನೆಸ್ ನ ಸಂಶೋಧಕರು ನಾವು ಅತಿಯಾಗಿ ಬಳಸುವ ನಮ್ಮ ಸ್ಮಾರ್ಟ್ ಫೋನ್ ಹೇಗೆ ನಮ್ಮ ಮಿದುಳಿನ ಮೇಲೆ ಪರಿಣಾಮ ಬೀರಬಹುದು ಎಂಬುದರ ಕುರಿತು ಅಧ್ಯಯನ ಮಾಡಿ ವರದಿ ಬಿಡುಗಡೆ ಮಾಡಿದ್ದಾರೆ.

ಈ ಸಂಶೋಧನೆಯಲ್ಲಿ ಸುಮಾರು 800 ಜನರಿಗೆ ಕಂಪ್ಯೂಟರ್ ಗಳಲ್ಲಿ ಸರಣಿಯಾಗಿ ಕೆಲಸಗಳನ್ನು ನೀಡಿ ಬೇರೆ ಕಡೆ ಗಮನ ಕೊಡದೆ ಪೂರ್ಣಗೊಳಿಸಲು ಹೇಳಲಾಯಿತು. ಸ್ಪರ್ಧಿಗಳಲ್ಲಿ ಕೆಲವರಿಗೆ ತಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್ ಕೆಳಮುಖ ಮಾಡಿ ಟೇಬಲ್ ಮೇಲಿಡುವಂತೆ, ಇನ್ನು ಕೆಲವರಿಗೆ ಜೇಬಿನಲ್ಲಿ, ಕೆಲವರಿಗೆ ಬ್ಯಾಗಿನಲ್ಲಿ ಇಡುವಂತೆ ಸೂಚಿಸಲಾಯಿತು. ಇನ್ನು ಕೆಲವರಿಗೆ ಪಕ್ಕದ ಕೋಣೆಯಲ್ಲಿ ಇಡುವಂತೆ ಸೂಚಿಸಿ ಕೆಲವರ ಮೊಬೈಲ್ ಗಳನ್ನು ಸೈಲೆಂಟ್ ಮೋಡ್ ಗೆ ಹಾಕಲಾಗಿತ್ತು.

ನಂತರ ಸಂಶೋಧಕರಿಗೆ ಒಂದು ವಿಷಯ ಸ್ಪಷ್ಟವಾಗಿ ತಿಳಿದು ಬಂದಿತ್ತು. ಯಾರ ಮೊಬೈಲ್ ಗಳು ಪಕ್ಕದ ರೂಮಿನಲ್ಲಿ ಇದ್ದವೋ ಅಂತಹ ಸ್ಪರ್ಧಿಗಳು, ಜೇಬಿನಲ್ಲಿ ಮೊಬೈಲ್ ಅನ್ನು ಇಟ್ಟುಕೊಂಡಿದ್ದವರಿಗಿಂತ ಉತ್ತಮ ಪ್ರದರ್ಶನ ನೀಡಿದ್ದರು. ಹಾಗೆಯೇ ತಮ್ಮ ಡೆಸ್ಕ್ ಮೇಲೆ ಮೊಬೈಲ್ ಇಟ್ಟುಕೊಂಡಿದ್ದ ಸ್ಪರ್ಧಿಗಳಿಗಿಂತಲೂ ಉತ್ತಮ ಪ್ರದರ್ಶನ ನೀಡಿದ್ದರು. ಈ ಫಲಿತಾಂಶದಿಂದ ಸ್ಮಾರ್ಟ್ ಫೋನ್ ಗಳನ್ನು ನಾವು ಬಳಸದಿದ್ದರೂ ಅವು ನಮಗೆ ಹತ್ತಿರವಿದ್ದಷ್ಟೂ ನಮ್ಮ ಬುದ್ದಿಯ ಮೇಲೆ ಹಿಡಿತ ಸಾಧಿಸುತ್ತವೆ ಎಂಬುದು ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಹಲವು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಏಕಾಗ್ರತೆಯನ್ನು ಕುಗ್ಗಿಸುವುದು, ಕುತ್ತಿಗೆ ನೋವು, ರಾತ್ರಿ ವೇಳೆ ನಿದ್ದೆಯಿಲ್ಲದಿರುವುದು, ಮುಂತಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಶಾಲೆಗ ಹೋಗುವ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸಿದಷ್ಟೂ ಏಕಾಗ್ರತೆ ಸಮಸ್ಯೆ ಎದುರಿಸುತ್ತಾರೆ, ಸೈಬರ್ ಕಿರಕುಳಕ್ಕೊಳಗಾಗುತ್ತಾರೆ ಎನ್ನಲಾಗುತ್ತಿದೆ.