ನಗರದ ಮಾಲ್ ಗಳು ಟ್ರಾಫಿಕ್ ಪೊಲೀಸರಿಗೆ ಡೋಂಟ್ ಕೇರ್ – News Mirchi

ನಗರದ ಮಾಲ್ ಗಳು ಟ್ರಾಫಿಕ್ ಪೊಲೀಸರಿಗೆ ಡೋಂಟ್ ಕೇರ್

ಶಾಪಿಂಗ್ ಮಾಲ್ ಗಳ ಬಳಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮಾಲ್ ಗಳಿಂದಾಗಿ ಸುತ್ತಮುತ್ತಲಿನ ರಸ್ತೆಗಳು ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಆಕರ್ಷಿಸುತ್ತಿರುವುದು ಟ್ರಾಫಿಕ್ ಸಮಸ್ಯೆಗೆ ಬಹುಮುಖ್ಯ ಕಾರಣ. ಇದರ ನಡುವೆ ಯಾವುದೇ ಶಾಪಿಂಗ್ ಮಾಲ್ ಗಳು ನಿರ್ಮಾಣಕ್ಕೂ ಮುನ್ನಾ ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆಯುತ್ತಿಲ್ಲ ಎಂಬುದು ಬಯಲಾಗಿದೆ.

ಶಾಪಿಂಗ್ ಮಾಲ್ ನಿರ್ಮಿಸಲು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯಿಂದ ನಿರಪೇಕ್ಷಣಾ ಪತ್ರದ ಜೊತೆಗೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯುವುದು ಅನುಸರಿಸಬೇಕಾದ ನಿಯಮ. ಆದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಹೇಳುವಂತೆ ಇದುವರೆಗೂ ಯಾವುದೇ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಟ್ರಾಫಿಕ್ ಪೊಲೀಸರಿಂದ ನಿರಪೇಕ್ಷಣಾ ಪತ್ರ ಪಡೆದಿಲ್ಲವಂತೆ.

ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಮಾಲ್ ಮಾಲೀಕರು ಟ್ರಾಫಿಕ್ ನಿರ್ವಹಣಾ ಯೋಜನೆಯನ್ನು ಟ್ರಾಫಿಕ್ ಪೊಲೀಸರಿಗೆ ಸಲ್ಲಿಸಿ ಎನ್.ಒ.ಸಿ ಪಡೆಯಬೇಕಿರುತ್ತದೆ. ಆದರೆ ಇದು ಕಡ್ಡಾಯವಾಗದ ಕಾರಣ ಅಪರೂಪಕ್ಕೆ ಕೆಲವೊಂದು ಮಾಲ್ ಗಳು ಈ ನಿಯಮಗಳನ್ನು ಪಾಲಿಸುತ್ತವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ನಾನು ಇದುವರೆಗೂ ಮಾಲ್ ನಿರ್ಮಾಣಕ್ಕೆ ಒಂದೂ ಎನ್.ಒ.ಸಿ ಗೆ ಸಹಿ ಮಾಡಿಲ್ಲ, ಆದರೆ ಮಾಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇತರೆ ಇಲಾಖೆಗಳು ಅನುಮತಿ ನೀಡುವುದರಿಂದ ನಾವೇನೂ ಹೇಳಲಾಗದು ಎಂದು ಆರ್.ಹಿತೇಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತರು( ಟ್ರಾಫಿಕ್) ಹೇಳಿದ್ದಾರೆ.

ತಜ್ಞರ ಪ್ರಕಾರ ಮಾಲ್ ಗಳಿಂದಾಗಿ ನಗರದಲ್ಲಿ ರಸ್ತೆಗಳು, ಮತ್ತು ಕೆಲವು ಪ್ರದೇಶಗಳು ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಸೆಳೆಯುತ್ತಿವೆ. ಟ್ರಾಫಿಕ್ ಪೊಲೀಸರನ್ನು ಗಣನೆಗೆ ತೆಗೆದುಕೊಳ್ಳುವುದರಿಂದ, ನಿರ್ದಿಷ್ಟ ರಸ್ತೆಯು ಹೆಚ್ಚುವರಿ ಟ್ರಾಫಿಕ್ ನಿಭಾಯಿಸಲು ಸಾಮರ್ಥ್ಯ ಹೊಂದಿದೆಯೇ ಇಲ್ಲವೆಂಬುದು ತಿಳಿಯುತ್ತದೆ. ಬಹುತೇಕ ಶಾಪಿಂಗ್ ಮಾಲ್ ಗಳಲ್ಲಿ ಪಾರ್ಕಿಂಗ್ ಗಾಗಿ ಮೀಸಲಿಟ್ಟ ಜಾಗ ಇತರೆ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದು, ಪಾರ್ಕಿಂಗ್ ಮಾಡಲು ವಾಹನ ಸವಾರರನ್ನು ಕಾಯುವಂತೆ ಮಾಡುತ್ತದೆ.

20 ಸಾವಿರ ಚ.ಮೀ ಗಿಂತಲೂ ಹೆಚ್ಚಿನ ವಿಸ್ತೀರ್ಣವುಳ್ಳ ಕಟ್ಟಡಗಳಿಗೆ ರಾಜ್ಯಕ್ಕೆ ಸಂಬಂಧಪಟ್ಟ ಮೌಲ್ಯಮಾಪನ ಪ್ರಾಧಿಕಾರಗಳು ಅನುಮತಿ ನೀಡುತ್ತವೆ. ಆದರೆ ಅದಕ್ಕಿಂತ ಕಡಿಮೆ ವಿಸ್ತೀರ್ಣವುಳ್ಳ ಕಟ್ಟಡಗಳು ಟ್ರಾಫಿಕ್ ಪೊಲೀಸರಿಂದ ಅನುಮತಿ ಪಡೆಯದೆ ನಿಯಮಗಳನ್ನು ಉಲ್ಲಂಘಿಸುತ್ತಿವೆಯಂತೆ.

Loading...