ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂದೂಕು ಕೈಗೆತ್ತಿಕೊಂಡ ಮಹಿಳೆಯರು

ಭಯೋತ್ಪಾದಕ ಕೃತ್ಯಗಳಿಂದ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರ ವಿರುದ್ಧ ಹೋರಾಡಲು ಮಹಿಳೆಯರು ಬಂದೂಕು ಕೈಗೆತ್ತಿಕೊಂಡಿದ್ದಾರೆ. ಉತ್ತರ ಅಫ್ಘನಿಸ್ತಾನದ ಜಾಜ್‌ಜಾನ್ ಪ್ರಾಂತ್ಯದಲ್ಲಿ ಐಎಸ್ ಉಗ್ರರು ಮತ್ತು ತಾಲೀಬಾನಿಗಳ ದಾಳಿಗಳಿಂದ ಇಲ್ಲಿನ ಹಲವು ಕುಟುಂಬಗಳ ಸದಸ್ಯರು ಸಾವನ್ನಪ್ಪಿದ್ದಾರೆ. ಹೀಗಾಗಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ 20 ರಿಂದ 80 ವರ್ಷ ವಯಸ್ಸಿನ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳುವುದರೊಂದಿಗೆ ಐಎಸ್ಐಎಸ್ ಉಗ್ರರ ಮೇಲೆ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ ಮಹಿಳೆಯರು ತಮಗೆ ಬಂದೂಕುಗಳು ಬೇಕು, ಇಲ್ಲವಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಮಹಿಳೆಯರ ಒತ್ತಡಕ್ಕೆ ಮಣಿದ ಸ್ಥಳೀಯ ಪೊಲೀಸ್ ಅಧಿಕಾರಿ ಅವರಿಗೆ ಬಂದೂಕು, ಗುಂಡುಗಳನ್ನು ನೀಡಿದ್ದಾರೆ.

ಆದರೆ ಸರ್ಕಾರಿ ಅಧಿಕಾರಿಗಳು ಮಾತ್ರ ಇದನ್ನು ಸಮರ್ಥಿಸುತ್ತಿಲ್ಲ. ಆಸಕ್ತ ಮಹಿಳೆಯರು ಸೇನೆಗೆ ಸೇರಿದರೆ ತರಬೇತಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿರುವ ಇಲ್ಲಿನ ಮಹಿಳೆಯರು, ತಮಗೆ ಯಾವುದೇ ತರಬೇತಿ ಇಲ್ಲದಿದ್ದರೂ ತಮ್ಮನ್ನು ತಾವು ಕಾಪಾಡಿಕೊಳ್ಳಬಲ್ಲೆವು ಎಂಬ ಆತ್ಮ ವಿಶ್ವಾಸದಿಂದ ಇದ್ದಾರೆ.