ಸೂಸೈಡ್ ಗೇಮ್ ಭಾರತಕ್ಕೂ ಕಾಲಿಟ್ಟಿದೆ, ನಿಮ್ಮ ಮಕ್ಕಳ ಬಗ್ಗೆ ಎಚ್ಚರ – News Mirchi

ಸೂಸೈಡ್ ಗೇಮ್ ಭಾರತಕ್ಕೂ ಕಾಲಿಟ್ಟಿದೆ, ನಿಮ್ಮ ಮಕ್ಕಳ ಬಗ್ಗೆ ಎಚ್ಚರ

ವಿಶ್ವಾದ್ಯಂತ ಒಂದು ಸ್ಮಾರ್ಟ್ ಫೋನ್ ಗೇಮ್ ಮಕ್ಕಳ ಜೀವ ತೆಗೆಯುತ್ತಿದೆ. ಗಂಟೆಗಟ್ಟಲೆ ಈ ಆಟವನ್ನು ಆಡಿ ಮಕ್ಕಳು ಮಾನಸಿಕವಾಗಿ ಅದಕ್ಕೆ ದಾಸರಾಗಿ, ಕೊನೆಗೆ ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದಾರೆ. ಇದೀಗ ಈ ಸೂಸೈಡ್ ಆಟದ ಮಹಾಮಾರಿ ಭಾರತಕ್ಕೂ ಕಾಲಿಟ್ಟಿದೆ. ಕೇರಳದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಆಟವನ್ನು ಆಡುತ್ತಾ ಮಾನಸಿಕವಾಗಿ ನರಳುತ್ತಿದ್ದಾರೆ ಎಂದು ಆ ರಾಜ್ಯದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದಾರೆ ಎಂದರೆ ಈ ಮಹಾಮಾರಿ ಆಟದ ಪರಿಣಾಮವೆಷ್ಟಿರಬಹುದೋ ಊಹಿಸಿ.

ವಿಜ್ಞಾನ, ಮನರಂಜನೆ, ಮಾಹಿತಿಗಳ ಖಣಜವಾಗಿರುವ ಇಂಟರ್ನೆಟ್ ನಲ್ಲಿ ಕೆಲ ತಜ್ಞರು ಸ್ಯಾಡಿಸ್ಟ್ ಗಳಾಗಿ ಬದಲಾಗಿ ತಯಾರಿಸಿರುವುದೇ ಈ “ಬ್ಲೂ ವೇಲ್ ಗೇಮ್”. ಯುವಕರನ್ನು ಮುಖ್ಯವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸುವಂತೆ ಈ ಆಟವನ್ನು ಅಭಿವೃದ್ಧಿಗೊಳಿಸಲಾಗಿದೆ. ವಿದೇಶಗಳಲ್ಲಿ ಈಗಾಗಲೇ ಸಾವಿರಾರು ಮಕ್ಕಳು ಈ ಗೇಮ್ ಗೆ ದಾಸರಾಗಿ ಜೀವ ಬಿಟ್ಟಿದ್ದಾರೆ. ಹೀಗಾಗಿ ವಿಶ್ವಾದ್ಯಂತ ಈ ಆಟಕ್ಕೆ ವಿರೋಧ, ಆತಂಕಗಳು ವ್ಯಕ್ತವಾಗುತ್ತಿವೆ. ಬ್ಲೂವೇಲ್ಸ್ ಗೇಮ್ ಅಥವಾ ಬ್ಲೂವೇಲ್ ಚಾಲೆಂಜ್ ಎಂದು ಈ ಆಟವನ್ನು ಕರೆಯುತ್ತಾರೆ.

ಸಾಮಾಜಿಕ ತಾಣ ಕೇಂದ್ರೀಕೃತವಾಗಿ ಈ ಆಟವನ್ನು ನಿರ್ವಹಿಸುತ್ತಾರೆ. ಸುಮಾರು 50 ದಿನಗಳ ಕಾಲ ಹಲವು ರೀತಿಯ ಸವಾಲುಗಳನ್ನು ಎದುರಿಸಿ ಆಟವಾಡುವಂತೆ ಮಾಡುತ್ತಾರೆ. ಕೊನೆಗೆ ಕಟ್ಟಡದಿಂದ ಜಿಗಿಯುವಂತೆ ಅಥವಾ ಇತರೆ ಆತ್ಮಹತ್ಯಾ ಮಾರ್ಗಗಳನ್ನು ಸೂಚಿಸುತ್ತಾರೆ. ಅದಾಗಲೇ ಆಟದ ಸವಿ ಅನುಭವಿಸಿದ್ದವರು ಯಾವುದೇ ಹಿಂಜರಿಕೆಯಿಲ್ಲದೆ ಸವಾಲು ಸ್ವೀಕರಿಸಿ ಜೀವ ಬಿಡುತ್ತಾರೆ. ಯೂರೋಪ್, ಅಮೆರಿಕಾಗಳಲ್ಲಿ ಈ ಆಟದ ಕುರಿತು ವಿರೋಧಗಳು ಹೆಚ್ಚಾದ್ದರಿಂದ ಅಲ್ಲಿನ ಸರ್ಕಾರಗಳನ್ನು ಈ ಆಟವನ್ನು ನಿಷೇಧಿಸಲು ಕ್ರಮ ಕೈಗೊಳ್ಳುತ್ತಿವೆ.

ಈ ಆಟದಲ್ಲಿ ಸೇರಿದವರಿಗೆ ಮೊದಲು ಸುಲಭವಾದ ಟಾಸ್ಕ್ ಗಳನ್ನು ನೀಡುತ್ತಾರೆ. ಮುಂಜಾನೆ ಬೇಗ ನಿದ್ದಿಯಿಂದೇಳುವುದು, ಭಯಾನಕ ಚಲನಚಿತ್ರಗಳನ್ನು ನೋಡುವುದು, ಕೈ ಮೇಲೆ ಬ್ಲೇಡಿನಿಂದ ತಿಮಿಂಗಿಲ ಚಿತ್ರವನ್ನು ಗೀಚುವುದು ಮುಂತಾದ ಸವಾಲುಗಳಿಂದ ಆಸಕ್ತಿ ಹುಟ್ಟಿಸುತ್ತಾರೆ. ಪ್ರತಿ ಚಾಲೆಂಜ್ ಅನ್ನು ಯಶಸ್ವಿಯಾಗಿ ಪೂರೈಸಿದವರು ತಮ್ಮ ಗೆಲುವನ್ನು ಗುಂಪಿನ ಇತರೆ ಸದಸ್ಯರ ಜೊತೆ ಹಂಚಿಕೊಳ್ಳಲು ಅನುಕೂಲವಾಗುವಂತೆ ಫೋಟೋಗಳ ರೂಪದಲ್ಲಿ ಆನ್ಲೈನ್ ನಲ್ಲಿ ಪೋಸ್ಟ್ ಮಾಡಿ ಆಟದಲ್ಲಿನ ಕುತೂಹಲವನ್ನು ಕೆರಳಿಸುತ್ತಾರೆ.

ಈ ಆಟವನ್ನು 2013 ರಲ್ಲಿ ರಷ್ಯಾದ ಫಿಲಿಪ್ ಬುಡೆಯ್ಕಿನ್ ಎಂಬ ಸೈಕಾಲಜಿ ವಿದ್ಯಾರ್ಥಿ ಕಂಡುಹಿಡಿದಿದ್ದಾರೆ ಎನ್ನಲಾಗುತ್ತಿದೆ. ಕೆಲ ಕಾಲದ ನಂತರ ಆತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದರು. ಸಮಾಜವನ್ನು ಶುದ್ಧಿಗೊಳಿಸಲೆಂದೇ ಈ ಆಟವನ್ನು ಕಂಡುಹಿಡಿದಿದ್ದಾಗಿ ಆ ವಿದ್ಯಾರ್ಥಿ ಹೇಳಿರುವುದು ಮತ್ತೂ ಆಶ್ಚರ್ಯ.

ಕೇರಳದಲ್ಲಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬ್ಲೂವೇಲ್ ಗೇಮ್ ದಾಸರಾಗುತ್ತಿರುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆತಂಕ ವ್ಯಕ್ತಪಡಿಸಿದ್ದು, ಈ ಆಟವನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇರಳದಲ್ಲಿ ಈ ಬ್ಲೂವೇಲ್ ಗೇಮ್ ಗೆ ದಾಸರಾಗಿದ್ದಾರೆ ಎನ್ನಲಾಗುತ್ತಿದೆ. ಮಕ್ಕಳು ಈ ಅಪಾಯಕಾರಿ ಆಟದ ದಾಸರಾಗದಂತೆ ಪೋಷಕರು ಗಮನವಹಿಸಬೇಕು.

Loading...