ಸುಶೀಲ್ ಮೋದಿ ಕಾರಿನ ಮೇಲೆ ಕಲ್ಲೆಸೆತ, ಆರು ಜನರ ಬಂಧನ

ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಯವರ ಕಾರಿನ ಮೇಲೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲಿಸರು 6 ಜನರನ್ನು ಬಂಧಿಸಿದ್ದಾರೆ. ಮಂಗಳವಾರ ಸಂಜೆ ವೈಶಾಲಿ ಜಿಲ್ಲೆಯಲ್ಲಿ ಸುಶೀಲ್ ಮೋದಿ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ದಾಳಿಯಲ್ಲಿ ಸುಶೀಲ್ ಮೋದಿ ಸುರಕ್ಷಿತವಾಗಿ ಪಾರಾದರೂ, ಅವರ ಕಾರುಗಳು ಹಾನಿಗೊಳಗಾಗಿವೆ. ಬಿಜೆಪಿಯ ಮಾಜಿ ಶಾಸಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸುಶೀಲ್ ಮೋದಿ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 150ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ಲಾಲೂ ಪ್ರಸಾದ್ ನೇತೃತ್ವದ ಅರ್.ಜೆ.ಡಿ ಪ್ರಬಲವಾಗಿರುವ ಪ್ರದೇಶದಲ್ಲಿ ಸುಶೀಲ್ ಮೋದಿ ಕಾರಿನ ಮೇಲೆ ದಾಳಿ ನಡೆದಿದ್ದು, ಘಟನೆಗೆ ಆರ್.ಜೆ.ಡಿ ಬೆಂಬಲಿಗರೇ ಕಾರಣ ಎಂದು ಸುಶೀಲ್ ಮೋದಿ ಆರೋಪಿಸಿದ್ದಾರೆ. ಆದರೆ ಇದನ್ನು ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅಲ್ಲಗೆಳೆದಿದ್ದಾರೆ.