ಸಾವಿರಾರು ಕೋಟಿಗೆ ಉತ್ತರಾಧಿಕಾರಿ: ಸಾಮಾನ್ಯನಂತೆ ಒಂದು ತಿಂಗಳ ಅಜ್ಞಾತವಾಸ – News Mirchi

ಸಾವಿರಾರು ಕೋಟಿಗೆ ಉತ್ತರಾಧಿಕಾರಿ: ಸಾಮಾನ್ಯನಂತೆ ಒಂದು ತಿಂಗಳ ಅಜ್ಞಾತವಾಸ

ಗುಜರಾತಿನ ಪ್ರಸಿದ್ಧ ಉದ್ಯಮಿ ಕುಟುಂಬವೊಂದರ ಉತ್ತರಾಧಿಕಾರಿ ಆತ. ಸುಮಾರು 6 ಸಾವಿರ ಕೋಟಿ ಮೌಲ್ಯದ ವ್ಯಾಪಾರ ಸಾಮ್ರಾಜ್ಯಕ್ಕೆ ಅಧಿಪತಿಯಾಗಲಿರುವವನು. ಆದರೆ ತಂದೆಯ ಆಜ್ಞೆಯಂತೆ ಅನಾಮಿಕನಂತೆ, ಜೇಬಿನಲ್ಲಿ ಕೇವಲ 500 ರೂಪಾಯಿ ಇಟ್ಟುಕೊಂಡು ಹೈದರಾಬಾದ್ ತಲುಪಿ, ಒಂದು ತಿಂಗಳ ಕಾಲ ಸಾಮಾನ್ಯ ಕೂಲಿಯಾಗಿ ಕೆಲಸ ಮಾಡಿದ್ದಾನೆ.

ತಂದೆ ಹೇಳಿದಂತೆಯೇ ಬದುಕಿ ತೋರಿಸಿ ಸಾಮಾನ್ಯರ ಜೀವನ ಹೇಗಿರುತ್ತದೆ ಎಂದು ಅರಿತುಕೊಂಡ ಹಿತಾರ್ಥ್ ಡೊಲಾಕಿಯಾ, ಹರೇಕೃಷ್ಣ ಎಕ್ಸ್ ಪೋರ್ಟ್ಸ್ ಮಾಲೀಕ ಘನಶ್ಯಾಮ್ ಡೊಲಾಕಿಯಾ ಪುತ್ರ. ಇದೇ ತಿಂಗಳು ಒಂದು ತಿಂಗಳ ಅಜ್ಞಾತವಾಸ ಮುಗಿದ ನಂತರ ತನ್ನ ಸಹೋದರಿ ಕೃಪಾಲಿ, ದೊಡ್ಡಪ್ಪ ಮುಂತಾದವರು ಹೈದರಾಬಾದ್ ಗೆ ಬಂದು ಆತನನ್ನು ಭೇಟಿಯಾದರು. ನಂತರ ಮಾಧ್ಯಮಗಳಿಗೆ ಐಪಿಎಸ್ ಅಧಿಕಾರಿ ರಾಜೀವ್ ತ್ರಿವೇದಿ ನಡೆದ ವಿಷಯವನ್ನು ಹೇಳಿದರು.

ಅಮೆರಿಕದಲ್ಲಿ ಬಿಬಿಎ ಮುಗಿಸಿ ಜೂನ್ ನಲ್ಲಿ ಮನೆಗೆ ಬಂದ ಹಿತಾರ್ಥ್, ತಂದೆಯ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಮುನ್ನ ತಂದೆಯಿಂದ ಒಂದು ಷರತ್ತು. ಅನಾಮಿಕನಂತೆ ಒಂದು ತಿಂಗಳು ಬದುಕಿ ತೋರಿಸು ಅಂತ. ಡೊಲಾಕಿಯಾ ಮನೆತನದ ಹೆಸರು ಬಳಸಿಕೊಳ್ಳಬಾರದು ಎಂಬ ಷರತ್ತಿನೊಂದಿಗೆ ಕೈಗೆ ಕೇವಲ 500 ರೂಪಾಯಿ ಮತ್ತು ಕವರ್ ನಲ್ಲಿ ವಿಮಾನದ ಟಿಕೆಟ್ ನೀಡಿ ಕಳುಹಿಸಿಕೊಟ್ಟರು.

ತಂದೆ ನೀಡಿದ್ದ ವಿಮಾನದ ಟಿಕೆಟ್ ಕೂಡಾ ಸರಿಯಾಗಿ ಗಮನಿಸದೆ ಜೇಬಿನಲ್ಲಿಟ್ಟುಕೊಂಡು ಬಂದವನಿಗೆ ವಿಮಾನ ನಿಲ್ದಾಣದಲ್ಲಿ ಗೊತ್ತಾಯಿತು ತಾನು ಹೋಗಲಿರುವುದು ಹೈದರಾಬಾದ್ ಗೆ ಎಂದು. ಹೈದರಾಬಾದ್ ನಲ್ಲಿ ಇಳಿದ ನಂತರ ಬಸ್ಸಿನ ಮೂಲಕ ಸಿಕಿಂದ್ರಾಬಾದ್ ತಲುಪಿದ ಹಿತಾರ್ಥ್, 100 ರೂಪಾಯಿ ಕೊಟ್ಟು 17 ಜನರಿರುವ ಹೋಟೆಲ್ ಕೊಠಡಿಯೊಂದರಲ್ಲಿ ಉಳಿದುಕೊಂಡ. ನಂತರ ತಾನು ರೈತ ಕುಟುಂಬದಿಂದ ಬಂದವನಾಗಿದ್ದು, ಉದ್ಯೋಗಕ್ಕಾಗಿ ಹುಡುಕುತ್ತಿದ್ದೇನೆ ಎಂದು ಹೇಳಿಕೊಂಡು ಉದ್ಯೋಗಕ್ಕಾಗಿ ಪ್ರಯತ್ನಿಸಿದ. ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರೆ, ಬಸ್ ಕಂಡಕ್ಟರ್ ಒಬ್ಬರ ಸಲಹೆಯಂತೆ ಅಮೀರ್ ಪೇಟ್ ಎಂಬಲ್ಲಿಗೆ ಹೋಗಿ ಕೆಲಸಕ್ಕೆ ಪ್ರಯತ್ನಿಸಿದ.

ಹೈಟೆಕ್ ಸಿಟಿಯಲ್ಲಿ ಕಂಪನಿಯೊಂದರಲ್ಲಿ ಸೇರಿ ಅಲ್ಲಿ ಸರಿಹೋಗದೆ ಅದನ್ನು ಬಿಟ್ಟು, 4 ಸಾವಿರ ಸಂಬಳ ನೀಡಿದ ಮೆಕ್ ಡೊನಾಲ್ಡ್ ನಲ್ಲಿ 5 ದಿನ ಕೆಲಸ ಮಾಡಿ ತೆಗೆದುಕೊಂಡಿರುವ ಚಾಲೆಂಜ್ ನಂತೆ ಅದನ್ನೂ ಬಿಟ್ಟ.  ಅಡಿದಾಸ್, ಜೇಡ್ ಬ್ಲೂ ಗಳಲ್ಲಿ ಸೇಲ್ಸ್ ಮ್ಯಾನ್ ಆಗಿ, ಮಾರ್ಕೆಟಿಂಗ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ. ನಾಲ್ಕು ವಾರಗಳಲ್ಲಿ ನಾಲ್ಕು ಕೆಲಸ ಬದಲಿಸಿದ ಆತ ತಿಂಗಳಾಂತ್ಯಕ್ಕೆ 5 ಸಾವಿರ ಸಂಪಾದಿಸಿದ್ದ. ಅಲ್ಲಿಯವರೆಗೂ ತನ್ನ ಗುರುತನ್ನೇ ಹೇಳಿಕೊಂಡಿರಲಿಲ್ಲ. ಪ್ರತಿದಿನ ರಸ್ತೆ ಪಕ್ಕ ಗಾಡಿಗಳಲ್ಲಿ ತಿಂಡಿ ತಿನ್ನುತ್ತಿದ್ದ. ಒಂದು ತಿಂಗಳು ಕಳೆದ ನಂತರ ತಾನೆಲ್ಲಿದ್ದೇನೆ ಎಂಬ ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ. ವಿಷಯ ತಿಳಿದೊಡನೆ ಆತನಿದ್ದಲ್ಲಿಗೆ ಬಂದ ಸಂಬಂಧಿಕರು, ಆತನ ಸ್ಥಿತಿ ನೋಡಿ ಕಣ್ಣೀರಾದರು.

ತಾನು ಎಲ್ಲರಿಗೂ ಸಾಮಾನ್ಯನಂತೆ ಕಾಣಿಸಲು ಆಗಲಿಲ್ಲ, ನನ್ನನ್ನು ಕಂಡವರೆಲ್ಲಾ ನನಗೆ ಸಹಾಯ ಮಾಡಲು ನೋಡುತ್ತಿದ್ದರು ಎಂದು ಹಿತಾರ್ಥ್ ಹೇಳಿದ್ದಾನೆ. ಈ ಒಂದು ತಿಂಗಳು ನನಗೆ ಜೀವನ ಹಲವು ಪಾಠಗಳನ್ನು ಕಲಿಸಿದೆ ಎಂದ. ಹಿತಾರ್ಥ್ ಸಹೋದರನೂ ಹಿಂದೆ ಇದೇ ರೀತಿ ಕೇರಳದಲ್ಲಿ ಅಜ್ಞಾತವಾಸ ಮಾಡಿ ಕೂಲಿಯಾಗಿ ಕೆಲಸ ಮಾಡಿ ಒಂದು ತಿಂಗಳು ಕಳೆದಿದ್ದನಂತೆ..

Loading...