ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ: ಅನಂತ ಕುಮಾರ್ ಹೆಗಡೆ ಹೆಸರು ತೇಲಿಬಿಟ್ಟ ವಿರೋಧಿ ಬಣಗಳು – News Mirchi

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ: ಅನಂತ ಕುಮಾರ್ ಹೆಗಡೆ ಹೆಸರು ತೇಲಿಬಿಟ್ಟ ವಿರೋಧಿ ಬಣಗಳು

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂದು ಘೋಷಿಸಿದರೂ ಪಕ್ಷದ ವಿರೋಧಿ ಬಣಗಳು ಮಾತ್ರ ಸುಮ್ಮನಿರದೇ ಹೊಸ ಹೊಸ ಹೆಸರುಗಳನ್ನು ತೇಲಿ ಬಿಡುತ್ತಿವೆ.

ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಆಗಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯಿಂದ ಪೈಪೋಟಿ ನಡೆದಿದ್ದು, ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೆಸರು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ ಆರಂಭವಾಗಿದ್ದು, ಹೆಗಡೆ ಒಂದು ಕಡೆ ಹಿಂದೂತ್ವದ ಪ್ರತೀಕವಾದರೆ, ಇನ್ನೊಂದೆಡೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಹೆಗಡೆ ಅವರು ಕೆಲ ದಿನಗಳ ಹಿಂದೆ ಕ್ರೂರ, ಕೊಲೆಗಾರ ಮತಾಂಧ ಸಾಮೂಹಿಕ ಅತ್ಯಾಚಾರಿ ಎಂದು ಕರೆಯಲ್ಪಡುವ ಟಿಪ್ಪು ಜಯಂತಿಗೆ ತನ್ನನ್ನು ಆಹ್ವಾನಿಸಬೇಡಿ ಎಂದು ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಗೆ ಪರ ವಿರೋಧ ಹೇಳಿಕೆಗಳು ವ್ಯಕ್ತವಾಗಿದ್ದವು. ಬಿಜೆಪಿಯ ಕೆಲವು ಶಾಸಕರು, ಸಂಸದರು ಹೆಗಡೆಯವರ ಹಾದಿ ಹಿಡಿದಿದ್ದರು.  ಕಟ್ಟಾ ಹಿಂದೂತ್ವವಾದಿಗಳು ಅವರ ಪರ ಧ್ವನಿಎತ್ತಲು ಆರಂಭಿಸಿದ್ದು, ರಾಜ್ಯದಲ್ಲಿ ಹೆಗಡೆ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ಅಭಿಪ್ರಾಯಗಳನ್ನು ಜಾಲತಾಣದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಉಗ್ರ ಹಿಂದೂತ್ವವನ್ನು ವಿರೋಧಿಸುವ ಪ್ರಗತಿಪರರು ಇದರ ವಿರುದ್ಧ ಧ್ವನಿ ಎತ್ತಿದ್ದು, ಹೆಗಡೆಯವರು ಸಂವಿಧಾನದ ವಿರೋಧಿ, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಎಂಬ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಗದ್ದುಗೆ ಏರಲು ಜನತೆ ಯಾರ ಕೈ ಹಿಡಿಯಲಿದ್ದಾರೆ ಎನ್ನುವುದು ಚುನಾವಣೆಯ ನಂತರವೇ ತಿಳಿದು ಬರಬೇಕಿದೆ.

 

Get Latest updates on WhatsApp. Send ‘Add Me’ to 8550851559

Loading...