ಗುಜರಾತ್ ರಾಜ್ಯಸಭೆ ಚುನಾವಣೆ, ಎಲ್ಲಾ ಹೈಡ್ರಾಮಾಗಳಿಗೆ ಇಂದು ತೆರೆ |News Mirchi

ಗುಜರಾತ್ ರಾಜ್ಯಸಭೆ ಚುನಾವಣೆ, ಎಲ್ಲಾ ಹೈಡ್ರಾಮಾಗಳಿಗೆ ಇಂದು ತೆರೆ

ಗುಜರಾತ್ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ರಾಜಕೀಯ ಡ್ರಾಮಾಗಳಿಗೆ ಇಂದು ತೆರೆ ಬೀಳಲಿದೆ. ಬಿಜೆಪಿಯಿಂದ ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಗೆಲುವು ಬಹುತೇಕ ಖಚಿತವಾಗಿದ್ದು, ಮೂರನೇ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ತೊರೆದು ಕಮಲ ಪಕ್ಷ ಸೇರಿದ ಬಲ್ವಂತ್ ಸಿಂಗ್ ರಜಪೂತ್ ಅವರನ್ನು ಇಳಿಸಿದೆ. ರಾಜ್ಯಸಭೆ ಚುನಾವಣೆಗೆ ಇಂದು 9 ಗಂಟೆಗೆ ಮತದಾನ ಆರಂಭವಾಗಿದೆ.

ಮತ್ತೊಂದು ಕಡೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿಗೆ ಮೂರನೇ ಅಭ್ಯರ್ಥಿಯನ್ನು ಮತ್ತು ಕಾಂಗ್ರೆಸ್ ಗೆ ಸೋನಿಯಾ ಆಪ್ತ ಅಹಮದ್ ಪಟೇಲ್ ಅವರನ್ನು ಗೆಲ್ಲಿಸಿಕೊಳ್ಳುವುದು ಪ್ರತಿಷ್ಟೆಯ ವಿಷಯವಾಗಿ ಬದಲಾಗಿದೆ. [ ಗುಜರಾತ್ ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೆ ಮತ್ತೊಂದು ಹೊಡೆತ? ]

ಅಹಮದ್ ಪಟೇಲ್ ಗೆಲ್ಲಲು 45 ಶಾಸಕರ ಬೆಂಬಲದ ಅಗತ್ಯವಿದೆ. ಆದರೆ ಈಗಾಗಲೇ ಕಾಂಗ್ರೆಸ್ ನ 6 ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರನಡೆದಿರುವುದು ಚಿಂತೆಗೀಡು ಮಾಡಿದೆ. ಸದ್ಯ ಅಹಮದ್ ಪಟೇಲ್ ಗೆಲ್ಲಲು ಇಬ್ಬರು ಶಾಸಕರನ್ನು ಹೊಂದಿರುವ ಎನ್ಸಿಪಿ ಪಕ್ಷದ ಬೆಂಬಲ ಅಗತ್ಯವಾಗಿ ಬೇಕು. ಆದರೆ ತಮ್ಮ ಪಕ್ಷ ಯಾರಿಗೆ ಬೆಂಬಲಿಸಬೇಕು ಎಂಬುದರ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ನಿನ್ನೆಯಷ್ಟೇ ಕಾಂಗ್ರೆಸ್ ಮೈತ್ರಿ ಪಕ್ಷವಾದ ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ಹೇಳಿದ್ದು ಕಾಂಗ್ರೆಸ್ ಗೆ ಮತ್ತಷ್ಟು ಆತಂಕ ತರಿಸಿದೆ.

ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲ್ಲಲು 14 ಮತಗಳ ಕೊರತೆಯಿದೆ, ಆದರೂ ಅದು ತನ್ನೆಲ್ಲಾ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಕಾಂಗ್ರೆಸ್ ತೊರೆದ ಶಾಸಕರ ಮತಗಳ ಜೊತೆಗೆ ಕಾಂಗ್ರೆಸ್ ನಲ್ಲೇ ಇರುವ ಶಾಸಕರು ಕ್ರಾಸ್ ಓಟಿಂಗ್ ನಡೆಸಿದರೂ ಆಶ್ಚರ್ಯವಿಲ್ಲ.

Loading...
loading...
error: Content is protected !!