5, 10 ವರ್ಷ ಅಧಿಕಾರದಲ್ಲಿರಲು ಬಂದವರಲ್ಲ, ದೇಶದ ಚಿತ್ರಣ ಬದಲಿಸಲು ಕನಿಷ್ಟ 50 ವರ್ಷ ಇರಬೇಕು

ಕೇವಲ 5-10 ವರ್ಷ ಅಧಿಕಾರದಲ್ಲಿರಲು ನಾವು ಬಂದವರಲ್ಲ, ಕನಿಷ್ಟವೆಂದರೂ 50 ವರ್ಷ ಅಧಿಕಾರದಲ್ಲಿರಬೇಕು. ಆಗಲೇ ದೇಶದ ಚಿತ್ರಣವನ್ನೇ ಬದಲಿಸಬಹುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಮಧ್ಯಪ್ರದೇಶ ಬಿಜೆಪಿ ಕೋರ್ ಕಮಿಟಿ ಸದಸ್ಯರೊಂದಿಗೆ ನಡೆದ ಸಭೆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಕೇಂದ್ರದಲ್ಲಿ 330 ಸಂಸದರೊಂದಿಗೆ ತಮ್ಮದು ಬಹುಮತದ ಸರ್ಕಾರ, ವಿವಿಧ ರಾಜ್ಯಗಳಲ್ಲಿ 1387 ಜನ ಶಾಸಕರಿದ್ದಾರೆ, ಇನ್ನೂ ಸಾಧಿಸಬೇಕಾದ್ದು ಬಹಳಷ್ಟಿದೆ ಎಂದು ಅವರು ಹೇಳಿದರು.

ಪ್ರಸ್ತುತ ಇರುವ ಪಕ್ಷದ ಪರಿಸ್ಥಿತಿ ಕುರಿತು ತೃಪ್ತಿಯಾಗಬಾರದು, ಮತ್ತಷ್ಟು ಮುಂದೆ ಸಾಗಲು ಪಕ್ಷದ ನಾಯಕರು ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಹಲವಾರು ನಾಯಕರು, ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ಪಕ್ಷ ಈ ಮಟ್ಟಕ್ಕೆ ತಲುಪಿದೆ ಎಂದು ಅಮಿತ್ ಶಾ ಹೇಳಿದರು. ದೇಶಾದ್ಯಂತ ಸದ್ಯ ಬಿಜೆಪಿ 10-12 ಕೋಟಿ ಜನ ಸದಸ್ಯರಿದ್ದಾರೆ. ದೇಶದಲ್ಲಿ ಪ್ರತಿ ಮೂಲೆಗೂ ಪಕ್ಷದ ಬಾವುಟವನ್ನು ಒಯ್ಯಲು ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.