ಅಪ್ರಾಪ್ತ ಬಾಲಕರ ಸಜೀವ ಸಮಾಧಿ, ಬಿಜೆಪಿ ಶಾಸಕನ ಪುತ್ರನ ಬಂಧನ

View Later

ಬಹ್ರೇಚ್: ಇಬ್ಬರು ಅಪ್ರಾಪ್ತ ಬಾಲಕರನ್ನು ಸಜೀವ ಸಮಾಧಿ ಮಾಡಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕರ ಪುತ್ರ ಸೇರಿದಂತೆ ಮರಳು ಗಣಿಗಾರಿಕೆ ಗುತ್ತಿಗೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿನ ಬಹ್ರೇಚ್ ಜಿಲ್ಲೆಯ ಭೌರೀ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಭೌರಿ ಗ್ರಾಮದ ಬಾಲಕ ಕರಣ್(10) ಮತ್ತು ನಿಸಾರ್ (11) ಬುಧವಾರದಿಂದ ಕಾಣೆಯಾಗಿದ್ದರು. ದಿನವಿಡೀ ಹುಡುಕಾಡಿದರೂ ಬಾಲಕರು ಪತ್ತೆಯಾಗದ ಕಾರಣ, ತಂದೆ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಹುಡುಕಾಟ ಬಿರುಸುಗೊಳಿಸಿದ ಪೊಲೀಸರಿಗೆ, ಗ್ರಾಮಕ್ಕೆ ಹೊಂದಿಕೊಂಡು ಹರಿಯುವ ಘಾಘ್ರಾ ನದಿ ಬಳಿ ನಿಸಾರ್ ಮೃತದೇಹ ಪತ್ತೆಯಾಗಿತ್ತು. ಅಲ್ಲಿಂದ ಅನತಿ ದೂರದಲ್ಲೇ ಕರಣ್ ನನ್ನು ಮರಳಿನಲ್ಲಿ ಹೂತಿಟ್ಟಿರುವುದು ಪತ್ತೆಯಾಗಿತ್ತು. ಮೃತದೇಹಗಳು ಸಿಕ್ಕ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿತ್ತು. ಹೀಗಾಗಿ ಖಚಿತವಾಗಿ ಇದು ಶಾಸಕರ ಮಗನದೇ ಕೃತ್ಯವೆಂದು ಗ್ರಾಮಸ್ಥರು ಅಲ್ಲಿನ ಲಾರಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ದಿನಗಳಿಂದ ಘಾಘ್ರಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೆಲ್ಲಾ ಸೂತ್ರದಾರ ಸ್ಥಳೀಯ ಪ್ರಯಾಗಪುರದ ಬಿಜೆಪಿ ಶಾಸಕ ಸುಭಾಶ್ ತ್ರಿಪಾಠಿ ಎಂಬ ಆರೋಪಗಳಿವೆ. ಶಾಸಕರ ಬೆಂಬಲಿಗನಾದ ಮನೋಜ್ ಶುಕ್ಲಾ ಹೆಸರಿನಲ್ಲಿ ಗಣಿಗಾರಿಕೆ ಪರವಾನಗಿ ಪಡೆದು, ಅನುಮತಿ ನೀಡಿದ್ದಕ್ಕಿಂತ ಹೆಚ್ಚಾಗಿ ಮರಳು ಸಾಗಣೆ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ. ಮರಳು ಗಣಿಗಾರಿಕೆಯಿಂದಾಗಿ ಹೊಲಗಳು ಬೀಳು ಬಿದ್ದಿವೆ. ಸ್ಥಳೀಯ ರೈತರು ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದರು. ಹೀಗಾಗಿ ಗ್ರಾಮದಲ್ಲಿನ ಕೆಲವರು ನೇರವಾಗಿ ಮರಳು ಮಾಫಿಯಾ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಹಲವು ಬಾರಿ ಲಾರಿಗಳನ್ನು ತಡೆಯುವ ಪ್ರಯತ್ನ ನಡೆಸಿದರು. ಮರಳು ಮಾಫಿಯಾ ವ್ಯವಹಾರವನ್ನೆಲ್ಲಾ ಶಾಸಕರ ಮಗ ನಿಶಾಂಕ್ ತ್ರಿಪಾಠಿ ನೋಡಿಕೊಳ್ಳುತ್ತಿರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.