ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಎದುರಿಸಲು ಕಮಲ ತಂತ್ರ – News Mirchi
We are updating the website...

ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಎದುರಿಸಲು ಕಮಲ ತಂತ್ರ

ಇತ್ತೀಚೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಜಿಡಿಎಸ್ ನೊಂದಿಗೆ ಅನಧಿಕೃತ ಮೈತ್ರಿ ಮಾಡಿಕೊಂಡ ಕಾಂಗ್ರೆಸ್, ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಬಿಜೆಪಿಗೆ ಮುಖಭಂಗವನ್ನುಂಟು ಮಾಡಿತ್ತು. ಈ ಫಲಿತಾಂಶದಿಂದ ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದ ಉತ್ತಮ, ಇದರಿಂದ ಜ್ಯಾತ್ಯಾತೀತ ಮತಗಳು ಚದುರಿ ಹೋಗದಂತೆ ತಡೆದು ಬಿಜೆಪಿಯನ್ನು ಸಮರ್ಥವಾಗಿ ಎದುರಿಸಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.

ಈ ಹಿಂದೆ ಬೀದರ್, ಹೆಬ್ಬಾಳ ಮತ್ತು ದೇವದುರ್ಗ ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶದ ಕಹಿ ಅನುಭವ ಈ ಬಾರಿ ಕಾಂಗ್ರೆಸ್ ಜೆಡಿಎಸ್ ಅನಧಿಕೃತ ಮೈತ್ರಿಗೆ ಕಾರಣಗಳಲ್ಲಿ ಒಂದು. ಇಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದ್ದು, ಕಾಂಗ್ರೆಸ್ ಒಂದರಲ್ಲಿ ಗೆದ್ದಿತ್ತು. ಇನ್ನು ಜೆಡಿಎಸ್ ಗಮನಾರ್ಹ ಮತಗಳನ್ನು ಪಡೆದರೂ ಮೂರರಲ್ಲೂ ಮೂರನೇ ಸ್ಥಾನದಲ್ಲಿ ಉಳಿಯಿತು.

2018 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ತಳ್ಳಿಹಾಕಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸುರೇಶ್ ಕುಮಾರ್, ಇದರಿಂದ ಬಿಜೆಪಿಗೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ. 1970-80 ರ ದಶಕದಲ್ಲಿ ಹಲವು ಪಕ್ಷಗಳು ಕಾಂಗ್ರೆಸ್ ಎದುರಿಸಲು ಒಂದಾಗಿದ್ದರು ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ಈಗ ಹೆಚ್ಚು ಬಲಗೊಂಡಿದೆ. ಈಗ ಜ್ಯಾತ್ಯಾತೀತ ಕೋಮುವಾದಿ ಮತಗಳ ಪ್ರಶ್ನೆ ಉದ್ಭವಿಸುವುದಿಲ್ಲ, ಈಗೇನಿದ್ದರೂ ಬಿಜೆಪಿ ಮತ್ತು ಇತರರ ನಡುವೆ ಸ್ಪರ್ಧೆ ಇದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳನ್ನು ಎದುರಿಸಲು ನಾವು ಅನುಸರಿಸಬೇಕಾದ ತಂತ್ರದಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಬಿಹಾರದಲ್ಲಿ ಆರ್‌ಜೆಡಿ, ಮೈತ್ರಿಕೂಟದಿಂದಾಗಿ ಸೋಲುಂಡ ನಾವು, ತಂತ್ರಗಳನ್ನು ಬದಲಿಸಿ ಉತ್ತರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಯಶಸ್ಸು ಕಂಡಿದ್ದೇವೆ. ರಾಜ್ಯದಲ್ಲೂ ಹೊಸ ಮಾದರಿಯನ್ನು ಅನುಸರಿಸಲಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಜೆಡಿಎಸ್ ನೊಂದಿಗಿನ ಮೈತ್ರಿ ಸಾಧ್ಯತೆಗಳನ್ನು ಹಿರಿಯ ಕಾಂಗ್ರೆಸ್ ನಾಯಕ ಬಿ.ಎಲ್ ಶಂಕರ್ ನಿರಾಕರಿಸಿದ್ದಾರೆ. ಜೆಡಿಎಸ್ ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ, ಹಾಗೇನಾದರೂ ಆದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಚುನಾವಣೆಗೂ ಮುನ್ನ ಸೋಲೊಪ್ಪಿಕೊಂಡಂತೆ ಆಗುತ್ತದೆ ಎಂದಿದ್ದಾರೆ.

ಗುಜರಾತಿನಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದು, ಅಲ್ಲಿನ ಫಲಿತಾಂಶ ರಾಜಕೀಯ ಲೆಕ್ಕಾಚಾರಗಳನ್ನು ಬದಲಿಸಬಹುದಾದ ಸಾಧ್ಯತೆ ಇರುವುದರಿಂದ, ಕರ್ನಾಟಕದಲ್ಲಿ ಮೈತ್ರಿಯಂತಹ ವಿಷಯಗಳ ಕುರಿತು ಇಷ್ಟು ಮುಂಚಿತವಾಗಿ ಚರ್ಚಿಸುವುದೂ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಜೆಡಿಎಸ್ ಹಿರಿಯ ನಾಯಕರು ಹೇಳುವಂತೆ, ಚುನಾವಣೆಗೂ ಮುನ್ನ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿದರೆ, ಚುನಾವಣೆ ನಂತರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಲಾಭ ಕಳೆದುಕೊಳ್ಳಬಹುದು. ಹೀಗಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್ ನೊಂದಿಗೆ ಜೆಡಿಎಸ್ ಹೋಗಲಾರದು ಎಂದು ಹೇಳಿದ್ದಾರೆ.

Contact for any Electrical Works across Bengaluru

Loading...
error: Content is protected !!