ಗುಜರಾತ್ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಮುಂದಿನ ತಿಂಗಳಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ 70 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್, ರಾಜ್ಯ ಬಿಜೆಪಿ ಅಧ್ಯಕ್ಷ ಜಿತೂ ವಾಘಾನಿ ಅವರೊಂದಿಗೆ ಐದು ಕಾಂಗ್ರೆಸ್ ಬಂಡಾಯ ಶಾಸಕರಿದ್ದಾರೆ. ಒಟ್ಟು 49 ಜನ ಹಾಲಿ ಶಾಸಕರಿಗೆ ಸ್ಥಾನ ಕಲ್ಪಿಸಲಾಗಿದೆ. ಮೂವರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮೊದಲ ಹಂತದಲ್ಲಿ ಡಿಸೆಂಬರ್ 9 ರಂದು 89 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಒಟ್ಟು 70 ಅಭ್ಯರ್ಥಿಗಳಲ್ಲಿ ಪಟೇಲ್ ಸಮುದಾಯಕ್ಕೆ ಸೇರಿದ 18 ಜನ, ಹಿಂದುಳಿದ ವರ್ಗಕ್ಕೆ ಸೇರಿದ 16 ಜನ, ಪರಿಶಿಷ್ಟ ಜಾತಿಯ ಮೂವರು, ಪರಿಶಿಷ್ಟ ವರ್ಗದ ಮೂವರು, ಕೋಲಿ ಸಮುದಾಯದವರಿಗೆ ಅವಕಾಶ ಕಲ್ಪಿಸಿದ್ದು, ಪಟ್ಟಿಯಲ್ಲಿ 16 ಜನ ಹೊಸಬರಿಗೆ ಅವಕಾಶ ನೀಡಲಾಗಿದೆ.

ಸದ್ಯ ಸಂಪುಟದಲ್ಲಿರುವ 15 ಸಚಿವರ ಹೆಸರು ಪಟ್ಟಿಯಲ್ಲಿವೆ. ರಾಜ್ ಕೋಟ್ ಪಶ್ಚಿಮದಿಂದ ಸಿಎಂ ರೂಪಾನಿ, ಮೊಹಸನಾದಿಂದ ಉಪಮುಖ್ಯಮಂತ್ರಿ ನಿತಿನ್, ಭಾವ್ ನಗರ ಪಶ್ಚಿಮದಿಂದ ಬಿಜೆಪಿ ರಾಜ್ಯಾಧ್ಯಕ್ಷ ಜಿತೂ ವಾಘಾನಿ ಅವರನ್ನು ಕಣಕ್ಕಿಳಿಸಿದ್ದಾರೆ. ಇತ್ತೀಚೆಗೆ ರಾಜೀನಾಮೆ ನೀಡಿದ ಪಿಸಿ ಬರಾಂಡಾಗೆ ಭಿಲೋಡಾ(ಎಸ್ಟಿ) ಕ್ಷೇತ್ರ ಲಭಿಸಿದೆ.

ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ರಾಘವ್ ಜೀ ಪಟೇಲ್, ಧರ್ಮೇಂದ್ರ ಸಿನ್ಹಾ ಜಡೇಜಾ, ರಾಮ್ ಸಿನ್ಹಾ ಪಾರ್ಮರ್, ಮನ್ ಸಿನ್ಹ್ ಚೌಹಾನ್, ಸಿಕೆ ರವೋಲ್ಜಿಯವರಿಗೆ ಮೊದಲ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ರಾಷ್ಟ್ರಪತಿ ಚುನಾವಣೆ ಸೇರಿದಂತೆ ರಾಜ್ಯಸಭೆ ಚುನಾವಣೆಯಲ್ಲಿಯೂ ಇವರು ಬಿಜೆಪಿಯನ್ನು ಬೆಂಬಲಿಸಿದ್ದರು. ಪಟ್ಟಿಯಲ್ಲಿ ಆರು ಮಹಿಳೆಯರಿದ್ದು, ಎಲ್ಲಾ ಜಾತಿ ವರ್ಗಗಳಿಗೆ ಸಮಾನ ಪ್ರಾತಿನಿಧ್ಯ ನೀಡಲು ಯತ್ನಿಸಿದ್ದೇವೆ ಎಂದು ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಹೇಳಿದ್ದಾರೆ. ಬುಧವಾರ ಸಭೆ ಸೇರಿದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಈ ಪಟ್ಟಿಯಲ್ಲಿ ಅಂತಿಮಗೊಳಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಂತಾದ ಪಕ್ಷದ ನಾಯಕರು ಪಾಲ್ಗೊಂಡಿದ್ದರು.

Get Latest updates on WhatsApp. Send ‘Add Me’ to 8550851559