ಬಿಜೆಪಿ ಕಾರ್ಯಕರ್ತನ ಅನುಮಾನಾಸ್ಪದ ಸಾವು

ಮೈಸೂರು: ಬಿಜೆಪಿ ಕಾರ್ಯಕರ್ತ ಮಾಗಳಿ ರವಿ (35) ಅವರ ಮೃತದೇಹ ಪಿರಿಯಾಪಟ್ಟಣ ತಾಲ್ಲೂಕಿನ ಮಾಗಳಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸಂಜೆ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ರವಿ ತಲೆಗೆ ಗಂಭೀರವಾಗಿ ಗಾಯವಾಗಿದ್ದು ಇದು ಕೊಲೆಯಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಪಿರಿಯಾಪಟ್ಟಣದಿಂದ ಬಿಜೆಪಿ ಸಭೆ ಮುಗಿಸಿ ಶುಕ್ರವಾರ ಸಂಜೆ ಬೈಕಿನಲ್ಲಿ ವಾಪಸಾಗುತ್ತಿದ್ದರು. ನಂತರ ಸ್ಥಳೀಯ ಪೊಲೀಸ್ ಠಾಣೆಯಿಂದ ಅರ್ಧ ಕಿಮೀ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತನ ಕುಟುಂಬದವರು ಶಂಕಿತ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಮೃತ ರವಿ ಬಿಜೆಪಿ ಕಾರ್ಯಕರ್ತ ಎಂದು ತಿಳಿದುಬಂದಿದೆ. ಆತನ ಕುಟುಂಬದವರು ಇದು ಕೊಲೆ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಸೆಕ್ಷನ್ 302 ಅಡಿಯಲ್ಲಿ ನಾವು ದೂರು ದಾಖಲಿಸಿಕೊಂಡಿದ್ದು ಪ್ರಕರಣದ ತನಿಖೆಗಾಗಿ ಐಪಿಎಸ್ ಅಧಿಕಾರಿಯನ್ನು ನೇಮಿಸಿದ್ದೇವೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.