ಆ ಪಾಪವೆಲ್ಲಾ ಇಂದಿರಾ ಗಾಂಧಿ ಕುಟುಂಬದ್ದೇ – ಲೇಖನ – News Mirchi

ಆ ಪಾಪವೆಲ್ಲಾ ಇಂದಿರಾ ಗಾಂಧಿ ಕುಟುಂಬದ್ದೇ – ಲೇಖನ

ಬೋಫೋರ್ಸ್ ಹಗರಣದಲ್ಲಿ ಭಾರೀ ಮೊತ್ತದ ಲಂಚ ಸಂದಾಯವಾಗಿದೆ ಎಂಬುದು ಸಾಬೀತಾದರೂ, ರಾಜೀವ್ ಗಾಂಧಿ ಘನತೆಗೆ ಕುಂದುಂಟಾಗದಂತೆ ಮಾಡಲು ಸ್ವೀಡನ್ ಸರ್ಕಾರ ಈ ಪ್ರಕರಣದ ತನಿಖೆಯನ್ನು ಅರ್ಧದಲ್ಲಿಯೇ ಕೈಬಿಟ್ಟಿತ್ತು. ಅಮೆರಿಕಾ ಗುಪ್ತಚರ ಸಂಸ್ಥೆ ಸಿಐಎ ನ ಯೂರೋಪ್ ವಿಭಾಗ 1980 ರಲ್ಲಿ ಈ ವಿಷಯವನ್ನು ಒಂದು ರಹಸ್ಯ ವರದಿಯಲ್ಲಿ ಬಹಿರಂಗಪಡಿಸಿತ್ತು. ಇತ್ತೀಚೆಗೆ ಬಹಿರಂಗವಾದ ಈ ಆಂತರಿಕ ವರದಿಯನ್ನು ಮುಂಬೈನಿಂದ ಪ್ರಕಟವಾಗಿ ಆಂಗ್ಲ ಪತ್ರಿಕೆಯ ಪ್ರತಿನಿಧಿಯೊಬ್ಬರು ನೋಡಿದರು. ಬೋಫೋರ್ಸ್ ಸಂಸ್ಥೆ ಸ್ವೀಡನ್ ದೇಶಕ್ಕೆ ಸೇರಿದ್ದು. ಅದೇ ದೇಶದಲ್ಲಿ ಒಂದು ರೇಡಿಯೋ ಸ್ಟೇಷನ್ ಲಂಚ ಪ್ರಕರಣವನ್ನು ವಿಶ್ವಕ್ಕೆ ತಿಳಿಯುವಂತೆ ಮಾಡಿದತು. ಇದರಿಂದಾಗಿ ಭಾರತದ ಪ್ರಧಾನಿ ರಾಜೀವ್ ಗಾಂಧಿ ಸಂಕಷ್ಟಕ್ಕೆ ಸಿಲುಕದಂತೆ ರಕ್ಷಿಸಬೇಕೆಂದು ಸ್ವೀಡಿಷ್ ಸರ್ಕಾರ ನಿರ್ಧರಿಸಿದ್ದಾಗಿ ಸಿಐಎ ಪತ್ರಗಳು ದೃಢಪಡಿಸಿವೆ. ಬೋಫೋರ್ಸ್ ಫಿರಂಗಿಗಳನ್ನು ಭಾರತೀಯ ರಕ್ಷಣಾ ಪಡೆಯಿಂದ ಖರೀದಿಸುವಂತೆ ಮಾಡಲು ಆ ಕಂಪನಿಯ ಅಧಿಕಾರಿಗಳು ಲಂಚ ನೀಡಿದ್ದರೆಂದು, ಲಂಚ ಪಡೆದವರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯೂ ಒಬ್ಬರೆಂಬ ಆರೋಪಗಳು ಕೇಳಿಬಂದವು. ಈ ಪ್ರಕರಣದಲ್ಲಿ ರಾಜೀವ್ ಗಾಂಧಿ ಅಪರಾಧಿ ಎಂದು ತೀರ್ಮಾನವಾಗದಂತೆ, ಒಟ್ಟು ಲಂಚ ಪ್ರಕರಣವನ್ನೇ ಮುಚ್ಚಿಹಾಕಲು ಸ್ವೀಡನ್, ಭಾರತ ಸರ್ಕಾರಗಳು ನಿರ್ಧರಿಸಿದವು. ಬೋಫೋರ್ಸ್ ಫಿರಂಗಿಗಳ ಮಾರಾಟಕ್ಕಾಗಿ ಮಧ್ಯವರ್ತಗಳಿಗೆ 4 ಕೋಟಿ ಕಮೀಷನ್ ನೀಡಿದ್ದರೆಂದು ಸ್ವೀಡನ್ ರಾಷ್ಟ್ರೀಯ ಆಡಿಟ್ ಬ್ಯೂರೋ ಪತ್ತೆ ಹಚ್ಚಿತ್ತು. ಆದರೆ, ಹಗರಣ ಬಯಲಾದ ನಂತರ ಎರಡೇ ವರ್ಷಗಳಲ್ಲಿ ಸ್ವೀಡನ್ ಸರ್ಕಾರ ಈ ಪ್ರಕರಣದ ತನಿಖೆಯನ್ನು ಅರ್ಧದಲ್ಲೇ ಮುಗಿಸಿಬಿಟ್ಟಿತು.

ಭಾರತೀಯ ಸೇನೆಗೆ ಶಕ್ತಿಶಾಲಿಯಾದ ಅತ್ಯಾಧುನಿಕ ಫಿರಂಗಿಗಳನ್ನು ಖರೀದಿಸಬೇಕು ಎಂದು 1980ರಲ್ಲಿ ಸರ್ಕಾರ ತೀರ್ಮಾನಿಸುವ ಮೂಲಕ ಬೋಫೋರ್ಸ್ ಹಗರಣಕ್ಕೆ ಸರ್ಕಾರ ಅಡಿಪಾಯ ಹಾಕಿತು. ಆಗ ಭಾರತೀಯ ಸೇನೆ ವಿವಿಧ ದೇಶಗಳ ಫಿರಂಗಿಗಳನ್ನು ಪರೀಕ್ಷಿಸಿತ್ತು. ಈ ಪರೀಕ್ಷೆಗಳಲ್ಲಿ ಫ್ರಾನ್ಸ್ ನ ಸೋಫ್ಮಾ ಫಿರಂಗಿ ಹೆಚ್ಚು ಉತ್ತಮ ಎಂಬುದು ಗಮನಕ್ಕೆ ಬಂದರೂ ಕೊನೆಗೆ ಈ ಗುತ್ತಿಗೆ ಬೋಫೋರ್ಸ್ ಪಾಲಾಯಿತು ಎಂದು ಜೆನಿವಾದ ಪತ್ರಕರ್ತೆ ಚಿತ್ರಾ ಸುಬ್ರಮಣಿಯನ್ ತಮ್ಮ ಸಂಶೋಧನಾ ಲೇಖನದಲ್ಲಿ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಸ್ವೀಡನ್, ಸ್ವಿಡ್ಜರ್ಲೆಂಡ್ ಗಳಲ್ಲಿ ತನಿಖೆ ನಡೆಸಿತು. ಲಂಚ ಪಡೆದವರಲ್ಲಿ ಒಟ್ಟಾವಿಯೋ ಕ್ವಟ್ರೋಚಿಯೂ ಒಬ್ಬರು ಎಂಬುದು ಸಿಬಿಐ ಪತ್ತೆ ಹಚ್ಚಿತ್ತು. ನಂತರ ಸಿಬಿಐ ಜೊತೆ ಪತ್ರಿಕಾ ಸಂಸ್ಥೆಗಳೂ ಈ ಹಗರಣದ ಕುರಿತು ತನಿಖೆ ನಡೆಸಿದಾಗ ಇಂದಿರಾ ಗಾಂಧಿ ಕುಟುಂಬಕ್ಕೂ ಬೋಫೋರ್ಸ್ ಹಗರಣಕ್ಕೂ ಲಿಂಕ್ ಇದೆ ಎಂಬುದು ಬಯಲಾಯಿತು.

1986 ಮಾರ್ಚ್ 31ರೊಳಗೆ ಭಾರತ ದೇಶದೊಂದಿಗೆ ಗುತ್ತಿಗೆ ಅಂತಿಮಗೊಳಿಸಿದರೆ ಶೇ.3 ರಷ್ಟು ಕಮೀಷನ್ ನೀಡುತ್ತೇವೆ ಎಂದು ಎ.ಇ ಸರ್ವೀಸಸ್ ಎಂಬ ಕಂಪನಿಗೆ ಬೋಫೋರ್ಸ್ ಸಂಸ್ಥೆ 1985ರಲ್ಲಿ ಆಮಿಷವೊಡ್ಡಿತ್ತು. ಆ ಅವಧಿ ಮುಗಿಯಲು ಇನ್ನೂ ಒಂದು ವಾರವಿದ್ದಂತೆ 1986 ಮಾರ್ಚ್ ನಲ್ಲಿ ರಾಜೀವ್ ಗಾಂಧಿ ಸರ್ಕಾರ ಬೋಫೋರ್ಸ್ ಒಪ್ಪಂದಕ್ಕೆ ಸಹಿ ಹಾಕಿತು. ಆ ನಂತರ ಎರಡು ತಿಂಗಳಿಗೆ ಒಪ್ಪಂದದ ಮೊತ್ತದಲ್ಲಿ ಶೇ.20 ರಷ್ಟನ್ನು ಭಾರತ ಸರ್ಕಾರ ಬೋಫೋರ್ಸ್ ಗೆ ಪಾವತಿ ಮಾಡಿತ್ತು.

ಎ.ಇ.ಸರ್ವೀಸಸ್ ಗೆ ನೀಡಿದ ಮಾತಿನಂತೆ ಶೇ.3 ರಷ್ಟು ಕಮೀಷನ್ ಅನ್ನು ಬೋಫೋರ್ಸ್ ನೀಡಿತು. ಆ ಮೊತ್ತವನ್ನು(73.83 ಲಕ್ಷ ಡಾಲರ್) ಜೂರಿಕ್(ಸ್ವಿಡ್ಜರ್ಲೆಂಡ್)ನಲ್ಲಿನ ನಾರ್ಡ್ ಫೈನಾನ್ಸ್ ಬ್ಯಾಂಕಿನ ಎ.ಇ.ಸರ್ವೀಸಸ್ ಖಾತೆಗೆ ಜಮೆ ಮಾಡಿತು. ಎ.ಇ.ಸರ್ವೀಸಸ್ ಈ ಹಣವನ್ನು ಕೋಲ್ಬರ್ ಇನ್ವೆಸ್ಟ್ ಮೆಂಟ್ಸ್ ಎಂಬ ಸಂಸ್ಥೆಯ ಖಾತೆಗೆ ವರ್ಗಾಯಿಸಿತು ಎಂದು ಸಿಬಿಐ ತನಿಖೆಯಲ್ಲಿ ತಿಳಿದು ಬಂದಿತು. ಇಷ್ಟಕ್ಕೂ ಈ ಕೋಲ್ಬರ್ ಸಂಸ್ಥೆ ಮಾಲೀಕರು ಯಾರು ಎಂಬುದು ನಿಮಗೆ ಗೊತ್ತೇ? ಸಾಕ್ಷಾತ್ ಸೋನಿಯಾ ಗಾಂಧಿ, ರಾಜೀವ್ ಗಾಂಧಿಗಳ ಆಪ್ತ ಮಿತ್ರರಾದ ಮರಿಯಾ, ಒಟ್ಟಾವಿಯೋ ಕ್ವಟ್ರೋಚಿ ದಂಪತಿಗಳೇ. ಆದಾಯ ತೆರಿಗೆ ಇಲಾಖೆಯ ಅಪಿಲೇಟ್ ಟ್ರಿಬ್ಯುನಲ್ ನ ದೆಹಲಿ ನ್ಯಾಯಪೀಠ ಕೂಡಾ ಈ ವಿಷಯವನ್ನು ದೃಢಪಡಿಸಿತು. ಬೋಫೋರ್ಸ್ ಸಂಸ್ಥೆ ತನ್ನ ಮೊದಲ ಹಂತದ ಲಂಚವನ್ನು 1986 ಸೆಪ್ಟೆಂಬರ್ 3 ರಂದು ಎ.ಇ.ಸರ್ವೀಸಸ್ ಖಾತೆಗೆ ಜಮೆ ಮಾಡಿತು. ಅದೇ ತಿಂಗಳಿನಲ್ಲಿ ಈ ಹಣ ಯೂನಿಯನ್ ಬ್ಯಾಂಕ್ ಆಫ್ ಸ್ವಿಡ್ಜರ್ಲೆಂಡ್ ನಲ್ಲಿನ ಕೋಲ್ಬರ್ ಇನ್ವೆಸ್ಟ್ ಮೆಂಟ್ ಖಾತೆಗೆ ವರ್ಗಾವಣೆಯಾಯಿತು. ಆ ಖಾತೆ ಮತ್ತದೇ ಕ್ವಟ್ರೋಚಿಯದ್ದೇ. 1988 ರ ಜುಲೈ 25ರಂದು ಆ ಹಣ ಅದೇ ಬ್ಯಾಂಕಿನ ವೆಟೆಲ್ ಸೆನ್ ಓವರ್ಸೀಸ್ ಖಾತೆಗೆ ಬದಲಾಯಿತು. 1990 ಮೇ 21ರಂದು ಕ್ವಟ್ರೋಚಿ ಈ ಹಣವನ್ನು ಮತ್ತೆ ಬದಲಾಯಿಸಿದರು. ಈ ಬಾರಿ ಚಾನೆಲ್ ಐಲ್ಯಾಂಡ್ಸ್, ಗೆರ್ನ್ ಸಿಲೋನಿ ಮತ್ತೊಂದು ಖಾತೆಗೆ ವರ್ಗಾಯಿಸಿದರು. ನಂತರ ವಾಜಪೇಯಿ ಸರ್ಕಾರದ ಮನವಿಯ ಮೇರೆಗೆ ಬ್ರಿಟನ್ ಅಧಿಕಾರಿಗಳು ಈ ಖಾತೆಯನ್ನು ಸೀಜ್ ಮಾಡಿದ್ದರು. ಮನಮೋಹನ್ ಸಿಂಗ್ ಸರ್ಕಾರ ಬಂದ ನಂತರ ಮತ್ತೆ ಈ ಖಾತೆಯ ಮೇಲಿನ ನಿರ್ಬಂಧ ತೆರವುಗೊಳಿಸಿತು. ನಂತರ ಆ ಖಾತೆಯೊಳಗಿದ್ದ ಹಣವೆಲ್ಲಾ ಕ್ವಟ್ರೋಚಿ ಜೇಬಿಗೆ ಹೋಗುವಂತೆ ಮಾಡಿತು. ಅದಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವೈಯುಕ್ತಿವಾಗಿ ಆಸಕ್ತಿ ವಹಿಸಿ ಕೆಲಸ ಮಾಡಿದ್ದರು.

ಭಾರತ ದೇಶಕ್ಕೆ ಫಿರಂಗಿ ಮಾರಾಟ ಮಾಡಲು ಬೋಫೋರ್ಸ್ ಕಂಪನಿ ಲಂಚ ನೀಡಿದೆ ಎಂದು ಸಾಬೀತು ಮಾಡುವ ಸಾಕ್ಷಿಗಳು ತಮಗೆ ಲಭ್ಯವಾಗಿವೆ ಎಂದು 1987 ಏಪ್ರಿಲ್ ನಲ್ಲಿ ಸ್ವೀಡನ್ ರೇಡಿಯೋ ಪ್ರಕಟಿಸಿದ್ದರಿಂದಾಗಿ ಈ ಹಗರಣ ಬೆಳಕಿಗೆ ಬಂತು. ಫಿರಂಗಿ ಖರೀದಿಗೆ ಮಧ್ಯವರ್ತಿಯಾಗಿದ್ದ ಎ.ಇ ಸರ್ವೀಸಸ್ ಸಂಸ್ಥೆ, ಹಗರಣ ಬೆಳಕಿಗೆ ಬಂದ ನಂತರ ಬೋಫೋರ್ಸ್ ಗೆ ಪತ್ರ ಬರೆದು ತನಗೆ ಇನ್ನೂ ಬರಬೇಕಿರುವ ಬಾಕಿ ಕಮೀಷನ್ ಅನ್ನು ಕೈಬಿಡುತ್ತಿರುವುದಾಗಿ ಹೇಳಿತ್ತು. ಬೋಫೋರ್ಸ್ ಹೇಳಿದ್ದ ಅವಧಿಯೊಳಗೆ ಖರೀದಿ ಒಪ್ಪಂದವಾಗುವಂತೆ ಇಟಲಿಯ ಕ್ವಟ್ರೋಚಿಗೆ ಹೇಗೆ ಸಾಧ್ಯವಾಯಿತು, ಹಗರಣ ಬೆಳಕಿಗೆ ಬಂದ ನಂತರ ಕ್ವಟ್ರೋಚಿ ಉಳಿದ ಕಂತಿನ ಕಮೀಷನ್ ಬೇಡ ಅಂದಿದ್ದೇಕೆ? ಇವೆಲ್ಲಾ ಪ್ರಶ್ನೆಗಳಾಗಿಯೇ ಉಳಿಯುತ್ತವೆ!

ದೇಶ ರಕ್ಷಣೆಗೆ ಅಗತ್ಯವಾದ ಫಿರಂಗಿಗಳ ಖರೀದಿಯಲ್ಲಿ ಲಂಚ ಸ್ವೀಕರಿಸುವುದು ದೇಶದ್ರೋಹದ ಅಡಿಯಲ್ಲಿ ಬರುತ್ತದೆ. ಬೋಫೋರ್ಸ್ ಹಣ ಎಲ್ಲೆಲ್ಲಿ ಯಾರು ಯಾರಿಗೆ ತಲುಪಿದೆಯೋ ಸ್ಪಷ್ಟ ಸಾಕ್ಷಿಗಳಿದ್ದರೂ ತನ್ನ ಪತಿ ಒಟ್ಟಾವಿಯೋನ್ನು 20 ವರ್ಷಗಳ ಕಾಲ ಪೀಡಿಸಿದರೆಂದು ಮರಿಯಾ ಕ್ವಟ್ರೋಚಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಸ್ವೀಡಿಷ್ ಕಂಪನಿಯಿಂದ ತಮ್ಮ ಆಪ್ತರಿಗೆ ಲಂಚ ಮುಟ್ಟಿದೆ ಎಂದು ಇಂದಿರಾಗಾಂಧಿ ಒಪ್ಪಿಕೊಳ್ಳುವವರೆಗೂ ಬೋಫೋರ್ಸ್ ಭೂತ ಅವರನ್ನು ಕಾಡುತ್ತಲೇ ಇರುತ್ತದೆ. ಬಹಿರಂಗವಾಗಿ ತಪ್ಪನ್ನು ಒಪ್ಪಿಕೊಳ್ಳುವುದು ಸರಿಯಾದ ಪ್ರಾಯಶ್ಚಿತ್ತವಾಗುತ್ತದೆ.

– ಎ.ಸೂರ್ಯಪ್ರಕಾಶ್ (ಪ್ರಸಾರ ಭಾರತಿ ಚೇರ್ಮನ್)

Loading...

Leave a Reply

Your email address will not be published.