ಸಿಪಿಎಂ ಕಛೇರಿ ಮೇಲೆ ಬಾಂಬ್ ದಾಳಿ

ಕೋಜಿಕೋಡ್: ತಿರುವನಂತಪುರಂ ಬಿಜೆಪಿ ಕಛೇರಿ ಮೇಲಿನ ಪೆಟ್ರೋಲ್ ದಾಳಿ ಮರೆಯುವ ಮುನ್ನವೇ, ಕೋಜಿಕೋಡ್ ಸಿಪಿಎಂ ಕಛೇರಿ ಮೇಲೆ ಗುರುವಾರ ಬಾಂಬ್ ದಾಳಿ ನಡೆದಿದೆ. ಗುರುವಾರ ರಾತ್ರಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮೋಹನನ್ ಕಛೇರಿಗೆ ಬರುತ್ತಿದ್ದಂತೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದಾರೆ. ಕಛೇರಿ ಮುಂದೆ ನಿಲ್ಲಿಸಿದ್ದ ಮೋಹನನ್ ಬೈಕು ಧ್ವಂಸಗೊಂಡಿದ್ದರೂ, ಮೋಹನನ್ ಪಾರಾಗಿದ್ದಾರೆ. ಒಟ್ಟು ನಾಲ್ವರು ವ್ಯಕ್ತಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಆರ್.ಎಸ್.ಎಸ್ ವ್ಯಕ್ತಿಗಳೇ ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೋಹನನ್ ಆರೋಪಿಸಿದ್ದಾರೆ. ಸಿಪಿಎಂ ಕಛೇರಿ ಮೇಲಿನ ದಾಳಿಯನ್ನು ಪ್ರತಿಭಟಿಸಿ ಸಿಪಿಎಂ, ಎಲ್ಡಿಎಫ್ ಪಕ್ಷಗಳು ಶುಕ್ರವಾರ ಕೋಜಿಕೋಡ್ ಜಿಲ್ಲೆ ಬಂದ್ ಗೆ ಕರೆ ನೀಡಿವೆ. [ದಿನಕರನ್ ಗೆ ಮತ್ತೊಂದು ಸಂಕಷ್ಟ]

ಬಿಜೆಪಿ ಕಛೇರಿ ಮೇಲೆ ನಡೆಸಿದ್ದ ಪೆಟ್ರೋಲ್ ಬಾಂಬ್ ದಾಳಿಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ತಿರುವನಂತಪುರಂ ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದರು. ಹಲವು ಸರ್ಕಾರಿ ಮತ್ತು ಖಾಸಗಿ ಕಛೇರಿಗಳು ಈ ವೇಳೆ ಮುಚ್ಚಲ್ಪಟ್ಟಿದ್ದು, ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಬುಧವಾರ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಸಿಪಿಎಂ ಬಿಜೆಪಿ ಕಛೇರಿ ಮೇಲೆ ದಾಳಿ ನಡೆಸಿದೆ ಎಂದ ಬಿಜೆಪಿ ಆರೋಪಿಸುತ್ತಿದೆ.