ಸುಖೋಯ್ ನಿಂದ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ವಿಶ್ವದಲ್ಲಿ ಅತ್ಯಂತ ವೇಗವಾದ ಸೂಪರ್ ಸಾನಿಕ್ ಕ್ಷಿಪಣಿ ಬ್ರಹ್ಮೋಸ್ ಬುಧವಾರ ಭಾರತೀಯ ವಾಯುಸೇನೆಯ ಯುದ್ಧವಿಮಾನ ಸುಖೋಯ್-30 ಎಂಕೆಐ ಮೂಲಕ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಮೊಟ್ಟ ಮೊದಲ ಬಾರಿಗೆ ಸುಖೋಯ್ ನಿಂದ ಬ್ರಹ್ಮೋಸ್ ಪರೀಕ್ಷೆ ಯಶಸ್ವಿಯಾಗಿರುವುದು ವಾಯುಸೇನೆಗೆ ಮತ್ತಷ್ಟು ಬಲ ತುಂಬಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಶ್ವದಲ್ಲಿಯೇ ಮುಂಚೂಣಿ ಯುದ್ಧ ವಿಮಾನಗಳಿಗೆ ಅಳವಡಿಸಲಾಗುವ ಅತ್ಯಂತ ತೂಕದ ಮತ್ತು ವೇಗದ ಕ್ಷಿಪಣಿಗಳಲ್ಲಿ ಬ್ರಹ್ಮೋಸ್ ಒಂದಾಗಿದೆ. ಭೂಪ್ರದೇಶ, ಸಮುದ್ರ ಮತ್ತು ವಾಯುಪ್ರದೇಶದಿಂದ ಪ್ರಯೋಗಿಸಲು ಸಾಧ್ಯವಾಗುವ ವಿಶ್ವದರ್ಜೆಯ ಬ್ರಹ್ಮೋಸ್ 2.5 ಟನ್ ತೂಕವನ್ನು ಹೊಂದಿದ್ದು, ಸುಖೋಯ್ ನಿಂದ ಬಳಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಡಿ.ಆರ್.ಡಿ.ಒ ಮತ್ತು ರಷ್ಯಾದ ಎನ್.ಪಿ.ಒ.ಎಂ ಜಂಟಿಯಾಗಿ ನಿರ್ಮಿಸಿವೆ.

ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಸುಖೋಯ್ ಯುದ್ಧ ವಿಮಾನದಿಂದ ಪ್ರಾಯೋಗಿಕವಾಗಿ ನಡೆಸಿದ ಪರೀಕ್ಷೆ ಯಶಸ್ವಿಯಾಗುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದೆ ಎಂದು ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಆ ರಾಸಲೀಲೆ ಸಿಡಿಯಲ್ಲಿ ರಂಜಿತಾ ಜೊತೆಗಿರುವುದು ನಿತ್ಯಾನಂದನೇ

ಬ್ರಹ್ಮೋಸ್ ಕ್ಷಿಪಣಿಯನ್ನು ಈಗಾಗಲೇ ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ. ಹಡಗಿನ ವಿನ್ಯಾಸದ ಆಧಾರದ ಮೇಲೆ ಇದನ್ನು ಲಂಬವಾಗಿ ಅಥವಾ ಇಳಿಜಾರಾಗಿ ಉಡಾಯಿಸಬಹುದಾಗಿದೆ. ಇನ್ನು ಭೂಪ್ರದೇಶದಿಂದ ಮೊಬೈಲ್ ಲಾಂಚರ್ ಮೂಲಕ ಉಡಾಯಿಸಬಹುದು. ಇದನ್ನು 40-50 ಮೀಟರ್ ಆಳದಿಂದ ಜಲಾಂತರ್ಗಾಮಿಯಿಂದಲೂ ಉಡಾವಣೆ ಮಾಡಬಹುದು. ಈ ಕ್ಷಿಪಣಿ ಖರೀದಿಗೆ ಈಗಾಗಲೇ ಹಲವು ದೇಶಗಳು ಆಸಕ್ತಿ ತೋರಿವೆ.