ಕಳಪೆ ಆಹಾರ ವೀಡಿಯೋ ಪೋಸ್ಟ್ ಮಾಡಿದ್ದ ಯೋಧನ ವಜಾ – News Mirchi

ಕಳಪೆ ಆಹಾರ ವೀಡಿಯೋ ಪೋಸ್ಟ್ ಮಾಡಿದ್ದ ಯೋಧನ ವಜಾ

ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಸಂಚಲನ ಸೃಷ್ಟಿಸಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ಮೂರು ತಿಂಗಳ ಕೊರ್ಟ್ ಮಾರ್ಷಲ್‌ ವಿಚಾರಣೆಯ ನಂತರ ಸಮ್ಮರಿ ಸೆಕ್ಯೂರಿಟಿ ಫೋರ್ಸ್ ಕೋರ್ಟ್ ತೇಜ್ ಬಹದ್ದೂರ್ ಅವರನ್ನು ಕೆಲಸದಿಂದ ವಜಾ ಮಾಡಿದೆ.

ಅಶಿಸ್ತು, ಬಿಎಸ್‌ಎಫ್ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಬಿಎಸ್ಎಫ್ ಘನತೆಗೆ ಕುಂದುಂಟು ಮಾಡಿರುವ ಆರೋಪದ ಮೇಲೆ ಈ ನಿರ್ಣಯ ಹೊರಬಿದ್ದಿದೆ.

ಮೊದಲು ಪೆನ್ಷನ್ ಮತ್ತು ನಿವೃತ್ತಿ ದಾಖಲೆಗಳನ್ನು ಸಿದ್ಧಪಡಿಸುವಂತೆ ನನಗೆ ಸೂಚಿಸಿದ್ದರು. ಆದರೆ ಇದ್ದಕ್ಕಿದ್ದಂತೆ ತೀರ್ಮಾನ ಬದಲಿಸಿದ್ದಾರೆ. ಹೀಗಾಗಿ ನನಗೆ ಈಗ ನಿವೃತ್ತಿಯ ನಂತರ ಸಿಗಬೇಕಿರುವ ಯಾವುದೇ ಸವಲತ್ತು ಸಿಗುವುದಿಲ್ಲ ಎಂದು ತೇಜ್ ಬಹದ್ದೂರ್ ಪ್ರತಿಕ್ರಿಯಿಸಿದ್ದಾರೆ.

ವಿಚಾರಣೆಗೆ ನನ್ನ ಸಹೋದ್ಯೋಗಿಗಳನ್ನು ಕರೆಸಲು ಬಯಸಿದ್ದೆ, ಆದರೆ ಅದಕ್ಕೆ ನನಗೆ ಅವಕಾಶವೇ ನೀಡಲಿಲ್ಲ. ಇಡೀ ಕೋರ್ಟ್ ಮಾರ್ಷಲ್ ಕಣ್ಣೊರೆಸುವ ತಂತ್ರವಾಗಿದ್ದು, ನನ್ನು ವಜಾ ಮಾಡಿರುವುದು ಪೂರ್ವಯೋಜಿತ ಕ್ರಮವಾಗಿದೆ ಎಂದು ಹೇಳಿದ್ದಾರೆ. ನಮ್ಮಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಕಾನೂನಿನ ಚೌಕಟ್ಟಿನಲ್ಲಿ ಬಹಿರಂಗಪಡಿಸಲು ಯೋಚಿಸಿದ್ದೆ. ನಾನು ವೀಡಿಯೋ ಅಪ್ಲೋಡ್ ಮಾಡಿದ ನಂತರ ಯೋಧರಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ಶೇ.70 ರಷ್ಟು ಸುಧಾರಿಸಿದೆ. ನನ್ನ ಕ್ರಮಕ್ಕೆ ಸಹೋದ್ಯೋಗಿಗಳಿಂದ ಅಪಾರ ಬೆಂಬಲವೂ ಸಿಕ್ಕಿತ್ತು ಎಂದರು.

ನನ್ನನ್ನು ಸೇವೆಯಿಂದ ವಜಾಗೊಳಿಸಿದ್ದರ ವಿರುದ್ಧ ಹೋರಾಡುತ್ತೇನೆ, ಅವಕಾಶ ಸಿಕ್ಕರೆ ಗೃಹಸಚಿವರನ್ನು ಮೊದಲು ಭೇಟಿ ಮಾಡಿ ಕುಂದುಕೊರತೆಗಳನ್ನು ಅವರ ಮುಂದೆ ಹೇಳಿಕೊಳ್ಳುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿಯವರನ್ನೂ ಭೇಟಿ ಮಾಡಲು ಇಚ್ಚಿಸಿದ್ದೇನೆ ಎಂದರು.

Loading...