ಮಾನಸಿಕ, ಹೃದ್ರೋಗ ತಜ್ಞರನ್ನು ಭೇಟಿಯಾಗುತ್ತಿರುವ ಕಾಳ ಧನಿಕರು

ಕಪ್ಪು ಹಣ ಹೊಂದಿದ್ದವರೆಲ್ಲಾ ಈಗ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಕೂಡಿಟ್ಟ ಕಪ್ಪು ಹಣ ಏನಾಗುವುದೋ ಎಂಬ ಆತಂಕದಲ್ಲಿ ಖಿನ್ನತೆಗೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೃದಯಾಘಾತಗಳಾದ ಘಟನೆಗಳೂ ನಡೆದಿವೆ. ಇದೇ ಆತಂಕದಲ್ಲಿ ಮಾನಸಿಕ ತಜ್ಞರು, ಹೃದ್ರೋಗ ತಜ್ಞರ ಬಳಿ ಹೋಗುತ್ತಿದ್ದಾರೆ.

ಕ್ಯೋಟಿಗಟ್ಟಲೆ ಕಪ್ಪು ಹಣ ಹೊಂದಿದ್ದ ದೊಡ್ಡ ಉದ್ಯಮಿಯೊಬ್ಬರು ಹೃದಯಾಘಾತಕ್ಕೆ ಒಳಗಾದ ಘಟನೆ ಮುಂಬೈನಲ್ಲಿ ನಡೆದಿದೆ. ಇದುವರೆಗೂ ಕಪ್ಪು ಹಣ ಕೂಡಿಟ್ಟು ನಿಶ್ಚಿಂತೆಯಿಂದ ಇದ್ದ ಈತನಿಗೆ ದೊಡ್ಡ ನೋಟು ರದ್ದುಗೊಂಡ ದಿನದಿಂದ ನೆಮ್ಮದಿಯಿಂದ ನಿದ್ದೆ ಮಾಡಿದ ರಾತ್ರಿಯಿಲ್ಲ. ಮೈಯೆಲ್ಲಾ ಬೆವೆತು, ಉಸಿರಾಡಲೂ ಕಷ್ಟ, ಕೂಡಿಟ್ಟ ಕಪ್ಪು ಹಣ ಏನಾಗುತ್ತದೆಯೋ ಎಂಬ ಭಯ. ಹೀಗಾಗಿ 55 ವರ್ಷದ ಉದ್ಯಮಿ ಎರಡು ಬಾರೀ ಹೃದ್ರೋಗ ತಜ್ಞರನ್ನು ಭೇಟಿಯಾದರು, ನಂತರ ಕೆಇಎಂ ಆಸ್ಪತ್ರೆಯ ಮಾನಸಿಕ ತಜ್ಞರಿಂದ ಪರೀಕ್ಷೆ ಮಾಡಿಸಿಕೊಂಡರು. ಮೋದಿಯವರ ದೊಡ್ಡ ನೋಟು ರದ್ದು ನಿರ್ಧಾರದ ನಂತರ ಹಲವರು ಕಾಳಧನಿಕರು ಆತಂಕಕ್ಕೊಳಗಾಗಿ ಈ ರೀತಿಯ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಮಾನಸಿಕ ತಜ್ಞರು ಹೇಳುತ್ತಿದ್ದಾರೆ.

ಮೂರು ದಿನಗಳಿಂದ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದ ಆ ಉದ್ಯಮಿಗೆ ಹೃದಯಾಘಾತ ಕೂಡಾ ಆಗಿತ್ತು. ಅವರಿಗೆ ಖಿನ್ನತೆಗೆ ಚಿಕಿತ್ಸೆಯೂ ನೀಡಿದ್ದಾಗಿ ಮಾನಸಿಕ ತಜ್ಞರು ಹೇಳಿದ್ದಾರೆ. ಇದು ಇವರೊಬ್ಬರ ಕಥೆಯಲ್ಲ, ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಭಯ ಆತಂಕಗಳಿಂದ ತಮ್ಮನ್ನು ಭೇಟಿ ಮಾಡುತ್ತಿರುವವರಲ್ಲಿ ಬಿಲ್ಡರ್‌ಗಳು, ದೊಡ್ಡ ದೊಡ್ಡ ವ್ಯಾಪಾರಿಗಳೇ ಹೆಚ್ಚು ಎನ್ನುತ್ತಿದ್ದಾರೆ.