ಕೇಂದ್ರ ನೌಕರರ ಭತ್ಯೆ ಹೆಚ್ಚಳಕ್ಕೆ ಸಂಪುಟ ಅಸ್ತು, ಜುಲೈ 1 ರಿಂದ ಪರಿಷ್ಕೃತ ವೇತನ – News Mirchi

ಕೇಂದ್ರ ನೌಕರರ ಭತ್ಯೆ ಹೆಚ್ಚಳಕ್ಕೆ ಸಂಪುಟ ಅಸ್ತು, ಜುಲೈ 1 ರಿಂದ ಪರಿಷ್ಕೃತ ವೇತನ

7 ನೇ ವೇತನ ಆಯೋಗದ ಶಿಫಾರಸುಗಳನ್ನು 34 ಮಾರ್ಪಾಡುಗಳೊಂದಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದಿಸಿದೆ. ಈ ಮಾರ್ಪಾಡುಗಳಿಂದಾಗಿ ಹೆಚ್ಚುವರಿ 1,448 ಕೋಟಿ ಹೊರೆಯಾಗಲಿದ್ದು, ವಾರ್ಷಿಕವಾಗಿ ಒಟ್ಟಾರೆ ರೂ.30,748 ಹೆಚ್ಚುವರಿ ಹೊರೆ ಬೀಳಲಿದೆ. ಬದಲಾದ ಭತ್ಯೆಗಳು ಜುಲೈ 1 ರಿಂದ ಜಾರಿಗೆ ಬರಲಿವೆ. 47 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಇದರಿಂದ ಅನುಕೂಲವಾಗಲಿದೆ. ಮನೆ ಭತ್ಯೆ ಹೆಚ್ಚಳದಿಂದಾಗಿ ದೆಹಲಿಯಂತಹ ನಗರಗಳಲ್ಲಿನ ನೌಕರರ ವೇತನದಲ್ಲಿ ಶೇ.45 ರಷ್ಟು ಏರಿಕೆ ಕಾಣಲಿದೆ.

ನಗರಗಳ ಆಧಾರದ ಮೇಲೆ ಮನೆ ಬಾಡಿಗೆ ಭತ್ಯೆಯನ್ನು ಕನಿಷ್ಟ ರೂ. 5,400, ರೂ. 3,600 ಮತ್ತು ರೂ. 1,800 ನಿಗದಿಗೊಳಿಸಲಾಗಿದೆ. ಅಂದರೆ ಕನಿಷ್ಟ ಮೂಲ ವೇತನ ರೂ.18,000 ದಲ್ಲಿ ಶೇ. 30, 20 ಮತ್ತು 10 ರಂತೆ ಲೆಕ್ಕ ಮಾಡಲಾಗಿದೆ. ಪರಿಷ್ಕರಿಸಲಾದ ಮನೆ ಬಾಡಿಗೆ ಭತ್ಯೆಗಳಿಂದ 7.5 ಲಕ್ಷ ನೌಕರರಿಗೆ ಲಾಭವಾಗಲಿದೆ. ವೈದ್ಯಕೀಯ ಭತ್ಯೆ ರೂ.500 ರಿಂದ ರೂ.1000 ಕ್ಕೆ ಏರಿಕೆ, ರೋಗಿಗಳ ಆರೈಕೆ ಭತ್ಯೆ ರೂ.2,100 ರಿಂದ ರೂ.5300, ಮಕ್ಕಳ ಶಿಕ್ಷಣ ಭತ್ಯೆ ರೂ. 1,500 ರಿಂದ ರೂ.2,250 ಕ್ಕೆ ಏರಿಕೆ ಮಾಡಲಾಗಿದೆ.

ಸೈನಿಕರ ಸಿಯಾಚಿನ್ ಭತ್ಯೆಯನ್ನು ತಿಂಗಳಿಗೆ ರೂ. 14,000 ಗಳಿಂದ ರೂ.30,000 ಗಳಿಗೆ ಏರಿಕೆ ಮಾಡಲಾಗಿದ್ದು, ತೀವ್ರ ಅಪಾಯದ ಸನ್ನಿವೇಶಗಳಲ್ಲಿ ಭಾಗಿಯಾಗುವ ಸೇನಾಧಿಕಾರಿಗಳಿಗೆ ತಿಂಗಳಿಗೆ ರೂ.21,000 ದಿಂದ ರೂ.42,000 ಕ್ಕೆ ಏರಿಕೆ ಮಾಡಲಾಗಿದೆ.

Contact for any Electrical Works across Bengaluru

Loading...
error: Content is protected !!