ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಅನಂತ್ ಕುಮಾರ್ ಹೆಗಡೆಗೆ ಒಲಿದ ಸಚಿವ ಸ್ಥಾನ – News Mirchi
ಅನಂತ್ ಕುಮಾರ್ ಹೆಗಡೆ

ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಅನಂತ್ ಕುಮಾರ್ ಹೆಗಡೆಗೆ ಒಲಿದ ಸಚಿವ ಸ್ಥಾನ

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕದಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಉತ್ತರಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಇತರೆ 8 ಜನರ ಜೊತೆ ಅವರು ಇಂದು ಬೆಳಗ್ಗೆ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅನಂತ್ ಕುಮಾರ್ ಹೆಗಡೆಯವರು ವಿದೇಶಾಂಗ ವ್ಯವಹಾರಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸತ್ತಿನ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ. ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಸಹಾಯ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಅವರು ನಡೆಸುತ್ತಿದ್ದಾರೆ.

ಧರ್ಮೇಂದ್ರ ಪ್ರಧಾನ್, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಸಂಪುಟ ದರ್ಜೆ ಸಚಿವರಾಗಿ ಬಡ್ತಿ ಪಡೆದಿದ್ದಾರೆ.

ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಮಧ್ಯಪ್ರದೇಶದ ಡಾ.ವೀರೇಂದ್ರ ಕುಮಾರ್, ಬಿಹಾರದಿಂದ ನಿವೃತ್ತ ಐಎಎಸ್ ಅಧಿಕಾರಿ ರಾಜ್ ಕುಮಾರ್ ಸಿಂಗ್, ನಿವೃತ್ತ ಐಎಫ್ಎಸ್ ಅಧಿಕಾರಿ ಹರ್ದೀಪ್ ಸಿಂಗ್ ಪುರಿ, ರಾಜಸ್ಥಾನದಿಂದ ಗಜೇಂದ್ರ ಸಿಂಗ್ ಶೇಖಾವತ್, ಉತ್ತರಪ್ರದೇಶದಿಂದ ಡಾ.ಸತ್ಯಪಾಲ್ ಸಿಂಗ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಅಲ್ಫೋನ್ಸ್ ಕಣ್ಣಂಧನಂ ಸಚಿವ ಸಂಪುಟ ಸೇರಿದ ಇತರರು.

ಪ್ರತಿ ಮಹತ್ವದ ವಿಷಯದಲ್ಲೂ ಯಾರೂ ನಿರೀಕ್ಷಿಸಿರದಂತಹ ತೀರ್ಮಾನ ತೆಗೆದುಕೊಳ್ಳುವ ಮೋದಿ ಮತ್ತು ಅಮಿತ್ ಶಾ, ಇದೀಗ ಸಚಿವ ಸಂಪುಟ ವಿಸ್ತರಣೆಯಲ್ಲೂ ಅದೇ ರೀತಿ ನಡೆದುಕೊಂಡಿದ್ದಾರೆ.

ಹೊಸಬರಿಗೆ ಪ್ರಾಮುಖ್ಯತೆ ನೀಡಿದ್ದು, ನೂತನ ಸಚಿವರಲ್ಲಿ ನಾಲ್ವರು ಮಾಜಿ ಅಧಿಕಾರಿಗಳಾಗಿರುವುದು ವಿಶೇಷ. ಅಲ್ಫೋನ್ಸ್, ರಾಜ್ ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಸತ್ಯಪಾಲ್ ಸಿಂಗ್ ಈ ಅವಕಾಶ ಪಡೆದ ಮಾಜಿ ಅಧಿಕಾರಿಗಳು. ಇಷ್ಟು ದಿನ ಆಡಳಿತ ವಿಭಾಗದಲ್ಲಿ ಕೆಲಸ ಮಾಡಿ, ಅವರ ಕಾರ್ಯವೈಖರಿಯನ್ನು ಗಮನಿಸಿದ್ದ ಮೋದಿ, ಆ ನಾಲ್ವರು ಅಧಿಕಾರಿಗಳಿಗೆ ಅವಕಾಶ ನೀಡಿದ್ದಾರೆ. ಅನಿರೀಕ್ಷಿತವಾಗಿ ಒಲಿದು ಬಂದ ಅವಕಾಶಕ್ಕೆ ನಾಲ್ವರು ಮಾಜಿ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Loading...