ಭ್ರಷ್ಟಾಚಾರ ದೂರುಗಳಿಗೆ ಒಂದೇ ದೂರವಾಣಿ ಸಂಖ್ಯೆ: ಸಿಬಿಐ ಚಿಂತನೆ

ನವದೆಹಲಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬರುವ ದೂರುಗಳನ್ನು ಸ್ವೀಕರಿಸಲು ಒಂದೇ ದೂರವಾಣಿ ಸಂಖ್ಯೆಯಿಂದ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ಆರಂಭಿಸಲು ಸಿಬಿಐ ಚಿಂತನೆ ನಡೆಸಿದೆ. ದೂರುಗಳನ್ನು ಸ್ವೀಕರಿಸಿದ ನಂತರ ಅದು ಕೇಂದ್ರದ ವ್ಯಾಪ್ತಿಗೆ ಬರುವ ಸಂಸ್ಥೆಗಳಿಗೆ ಸಂಬಂಧಪಟ್ಟ ಭ್ರಷ್ಟಾಚಾರದ ದೂರು ಆದರೆ ಸಿಬಿಐ ನೇರವಾಗಿ ತನಿಖೆ ನಡೆಸುತ್ತದೆ.

ಒಂದು ವೇಳೆ ರಾಜ್ಯದ ಅಧೀನದ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳಾದರೆ ಆಯಾ ರಾಜ್ಯಗಳ ಭ್ರಷ್ಟಾಚಾರ ನಿಯಂತ್ರಣ ವಿಭಾಗಗಳಿಗೆ ವರ್ಗಾಯಿಸುತ್ತದೆ. ನಂತರ ಹೀಗೆ ವರ್ಗಾಯಿಸಿದ ದೂರುಗಳ ಬೆಳವಣಿಗೆಗಳ ಮಾಹಿತಿಯನ್ನು ರಾಜ್ಯಗಳಿಂದ ಪಡೆಯುತ್ತದೆ. ಕೇವಲ ಫೋನ್ ಮಾತ್ರವಲ್ಲದೆ ಇಮೇಲ್, ಸಾಮಾಜಿಕ ತಾಣಗಳ ಮೂಲಕ ಬರುವ ದೂರುಗಳನ್ನೂ ಇದರಲ್ಲಿ ಸ್ವೀಕರಿಸುತ್ತಾರೆ.