ಬೋಫೋರ್ಸ್ ಮರುವಿಚಾರಣೆಗೆ ಸಿಬಿಐ ಪಿಟೀಷನ್

ಬೊಫೋರ್ಸ್ ಪ್ರಕರಣದ ತನಿಖೆಯನ್ನು ಪುನರಾರಂಭಿಸಲು ಕೇಂದ್ರ ತನಿಖಾ ಸಂಸ್ಥೆ ಪ್ರಯತ್ನಿಸುತ್ತಿದೆ. ಪ್ರಕರಣದ ಮರುವಿಚಾರಣೆಗೆ ಆದೇಶಿಸಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಸಿಬಿಐ ಪಿಟೀಷನ್ ದಾಖಲಿಸಲಿದೆ ಎನ್ನಲಾಗುತ್ತಿದೆ.

ಬ್ರಿಟನ್ನಿನ ಉದ್ಯಮಿಗಳಾದ ಹಿಂದೂಜಾ ಸಹೋದರರಾದ ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಚಂದ್ ಅವರ ಮೇಲಿನ ಆರೋಪಗಳನ್ನು ರದ್ದುಪಡಿಸಿದ ಹೈಕೋರ್ಟ್ ಈ ಪ್ರಕರಣದಲ್ಲಿ ಮೇ 31, 2005 ರಂದು ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಈ ತೀರ್ಪನ್ನು 90 ದಿನಗಳ ಒಳಗೆ ಅಂದಿನ ಸಿಬಿಐ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಬೇಕಿತ್ತು. ಆದರೆ ಸಿಬಿಐ ಆ ಕೆಲಸಕ್ಕೆ ಕೈಹಾಕಿರಲಿಲ್ಲ. ಇದಕ್ಕೆ ಕಾರಣ ಅಂದು ಅಧಿಕಾರದಲ್ಲಿದ್ದ ಕೇಂದ್ರ ಸರ್ಕಾರದ ಒತ್ತಡವೇ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಈಗ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸ್ಪೆಷಲ್ ಲೀವ್ ಪಿಟೀಷನ್ ಅನ್ನು ಸಿಬಿಐ ದಾಖಲಿಸಲಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣದ ಮರುವಿಚಾರಣೆಗೆ ಕೇಂದ್ರ ಸರ್ಕಾರದಿಂದ ಅನುಮತಿಯನ್ನು ಕೇಳಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದೇ ವರ್ಷ ಜುಲೈನಲ್ಲಿ ಬಿಜು ಜನತಾದಳ ಸಂಸದ ಭರ್ತೃಹರಿ ಮಹತಬ್ ನೇತೃತ್ವದ ಸಮಿತಿಯು ಸಂಸತ್ತಿಗೆ ಸಲ್ಲಿಸಿದ ವರದಿಯಲ್ಲಿ, ಬೋಫೋರ್ಸ್ ಪ್ರಕರಣದ ವಿಚಾರಣೆಯಲ್ಲಿ ಹಲವು ಲೋಪಗಳಿರುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕಣಕ್ಕಿಳಿದ ಸಿಬಿಐ, ಸುಪ್ರೀಂ ಕೋರ್ಟ್ ಅಥವಾ ಕೇಂದ್ರ ಸರ್ಕಾರದಿಂದ ಆದೇಶ ಪಡೆದೇ ಬೋಫೋರ್ಸ್ ಪ್ರಕರಣದ ಮರುವಿಚಾರಣೆ ನಡೆಸಲು ಸಾಧ್ಯ ಎಂದು ಪ್ರಕಟಿಸಿದೆ.

ಇದರ ಜೊತೆ ಇತ್ತೀಚೆಗೆ ಖಾಸಗಿ ಡಿಟೆಕ್ಟೀವ್ ಮೈಕೇಲ್ ಹೆರ್ಷಮ್ ಬೋಫೋರ್ಸ್ ಕುರಿತು ಮಾಡಿರುವ ಆರೋಪಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ 30 ವರ್ಷಗಳ ಹಿಂದಿನ ಬೋಫೋರ್ಸ್ ಹಗರಣ ಪ್ರಕರಣಕ್ಕೆ ಮತ್ತೆ ಜೀವ ಬಂದಂತಾಗಿದೆ. ಇತ್ತೀಚೆಗೆ ಪ್ರಕರಣದ ಮರುವಿಚಾರಣೆಗೆ ಕೋರಿ ಬಿಜೆಪಿ ನಾಯಕ ಅಜಯ್ ಕುಮಾರ್ ಅಗರ್ವಾಲ್ ದಾಖಲಿಸಿರುವ ಪಿಟೀಷನ್ ಅನ್ನು ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಂ ಕೋರ್ಟ್, ಅಕ್ಟೋಬರ್ 30 ರ ನಂತರ ವಿಚಾರಣೆ ನಡೆಸುವುದಾಗಿ ಪ್ರಕಟಿಸಿದೆ.

ಏನಿದು ಪ್ರಕರಣ

1986 ಮಾರ್ಚ್ 24 ರಂದು, 155 ಮಿ.ಮೀ. ನ 410 ಹೊವಿಟ್ಜರ್ ಗನ್ ಗಳನ್ನು ಖರೀದಿಸಲು ಭಾರತ ಸರ್ಕಾರ ಸ್ವೀಡನ್ನಿನ ಎಬಿ ಬೋಫೋರ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದ ಮೌಲ್ಯ 1,437.72 ಕೋಟಿ ರೂ. ಆದರೆ ಭಾರತದಲ್ಲಿನ ರಾಜಕೀಯ ನಾಯಕರಿಗೆ ಲಂಚ ನೀಡಿ ಬೋಫೋರ್ಸ್ ಸಂಸ್ಥೆ ಈ ಒಪ್ಪಂದ ಮಾಡಿಕೊಂಡಿದೆ ಎಂದು ಸ್ವೀಡನ್ ರೇಡಿಯೋ ಒಂದು ಪ್ರಕಟಿಸಿತು. ಹೀಗಾಗಿ ಇದು ದೇಶಾದ್ಯಂತ ಸಂಚಲನಕ್ಕೆ ಕಾರಣವಾಯಿತು.

Get Latest updates on WhatsApp. Send ‘Add Me’ to 8550851559