ಅಂತರ್ಜಾತಿ ವಿವಾಹ: 2.5 ಲಕ್ಷ ಪಡೆಯಲು ಇನ್ನು ವಾರ್ಷಿಕ ಆದಾಯದ ಮಿತಿಯಿಲ್ಲ

ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಂದಿದ್ದ ಯೋಜನೆಗಿದ್ದ ವಾರ್ಷಿಕ ಗರಿಷ್ಟ 5 ಲಕ್ಷದ ಆದಾಯದ ಮಿತಿಯನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದ್ದು, ಅಂತರ್ಜಾತಿ ಮದುವೆಯಾಗುವ ಜೋಡಿಗಳಲ್ಲಿ ವಧು ಅಥವಾ ವರ ದಲಿತರಾಗಿದ್ದರೆ ಸಾಕು, ಈ ಯೋಜನೆಯಡಿ ನೆರವು ಪಡೆಯಲು ಅರ್ಹರಾಗಿರುತ್ತಾರೆ.

2013 ರಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಆರಂಭವಾದ ಈ ಯೋಜನೆ ಮೂಲಕ, ಪ್ರತಿ ವರ್ಷ ಕನಿಷ್ಟ 500 ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿಲಾಗಿತ್ತು. ಈ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಜೋಡಿಗಳ ವಾರ್ಷಿಕ ಆದಾಯ 5 ಲಕ್ಷ ರೂಪಾಯಿ ಮೀರದಂತಿರಬೇಕಿತ್ತು. ಅರ್ಹ ದಂಪತಿಗಳು 2.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.

ಟ್ರಂಪ್ ನಂತರ ಮೋದಿಯೇ ಎಂದ ಟ್ವಿಟರ್

ಈ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ದಂಪತಿಗಳಿಗೆ ಇದು ಮೊದಲ ಮದುವೆಯಾಗಿರಬೇಕು ಮತ್ತು ಹಿಂದೂ ವಿವಾಹ ಕಾಯ್ದೆಯಡಿ ಅವರ ವಿವಾಹ ನೋಂದಣಿಯಾಗಿರಬೇಕು ಎಂಬ ನಿಯಮವೂ ಇದೆ. ಅಂತರ್ಜಾತಿ ಮದುವೆಯಾಗುತ್ತಿದ್ದಂತೆ ಸರ್ಕಾರದ ಪ್ರೋತ್ಸಾಹಧನ ಪಡೆದು ಒಂದು ನೆಲೆ ಕಂಡುಕೊಳ್ಳಲು ಅನುಕೂಲವಾಗುವ ಉತ್ತಮ ಯೋಜನೆ ಇದು ಎಂದೇ ಬಿಂಬಿತವಾಗಿತ್ತು.

ಈಗಾಗಲೇ ಕೆಲವು ರಾಜ್ಯಗಳು ಇಂತಹದ್ದೇ ಯೋಜನೆಗಳನ್ನು ಹೊಂದಿದ್ದರೂ, ಯಾವುದೇ ಆದಾಯದ ಮಿತಿಯಿರಲಿಲ್ಲ. ಹೀಗಾಗಿ ಈಗ ಕೇಂದ್ರವು ಈ ಯೋಜನೆಗಿದ್ದ ಆದಾಯದ ಮಿತಿಯನ್ನು ತೆಗೆದುಹಾಕಿದೆ. ಅದೂ ಅಲ್ಲದೆ ಈ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿರಲೂ ಇಲ್ಲ. 2014-15 ರಲ್ಲಿ 522 ದಂಪತಿಗಳು ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದರೆ ಕೇವಲ 72 ಜನರಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗಿತ್ತು. 2016-17 ರಲ್ಲಿ 736 ಅರ್ಜಿಗಳಲ್ಲಿ 45 ಜನರಿಗೆ ಮಾತ್ರ ಹಣ ನೀಡಲಾಗಿತ್ತು. ಇನ್ನು 2016-17 ರಲ್ಲಿ ಇದುವರೆಗೂ 409 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 74 ಜೋಡಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ.

ಈ ಯೋಜನೆ ಕುರಿತು ಜನರಿಗೆ ಹೆಚ್ಚು ಮಾಹಿತಿ ಇಲ್ಲದಿರುವುದು, ವಿವಾಹವನ್ನು ಹಿಂದು ವಿವಾಹ ಕಾಯ್ದೆಯಡಿಯಲ್ಲಿ ರಿಜಿಸ್ಟರ್ ಮಾಡಿಸಬೇಕಿರುವುದು, ಸ್ಥಳೀಯ ಸಂಸದ, ಶಾಸಕ ಅಥವಾ ಜಿಲ್ಲಾಧಿಕಾರಿಗಳಿಂದ ಶಿಫಾರಸು ಪತ್ರ ತರುವುದು ಮುಂತಾದವುಗಳಿಂದಾಗಿ ಈ ಯೋಜನೆ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

Get Latest updates on WhatsApp. Send ‘Subscribe’ to 8550851559