ಉದ್ಯೋಗ ಮಾಡುತ್ತಿದ್ದ ಬ್ಯಾಂಕ್ ಗೆ ಕನ್ನ : ಆರೋಪಿಗಳ ಬಂಧನ – News Mirchi

ಉದ್ಯೋಗ ಮಾಡುತ್ತಿದ್ದ ಬ್ಯಾಂಕ್ ಗೆ ಕನ್ನ : ಆರೋಪಿಗಳ ಬಂಧನ

ಬೆಂಗಳೂರು, ಅ. 23: ತಾವು ಕೆಲಸ ನಿರ್ವಹಿಸುತ್ತಿದ್ದ ಬ್ಯಾಂಕ್‌ನಿಂದ 12.15 ಕೋಟಿ ದೋಚಿದ್ದ ಇಬ್ಬರು ಲೆಕ್ಕಾಧಿಕಾರಿಗಳು ವೈಟ್ ಫೀಲ್ಡ್ ಉಪವಿಭಾಗದ ಪೊಲೀಸರ ವಶದಲ್ಲಿದ್ದಾರೆಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಅವರು ದೊಡ್ಡಗುಬ್ಬಿಯ ಮಾರುತಿ ಅಲಿಯಾಸ್ ರಾಮು, ಬೆಳ್ಳಂದೂರಿನ ಸುರೇಶ್ ಬಾಬುವನ್ನು ಬಂಧಿಸಲಾಗಿದೆ. ಇವರು ಹೊರಗುತ್ತಿಗೆ ನೀಡುತ್ತಿದ್ದ ಅಂತಾರಾಷ್ಟ್ರೀಯ ಬ್ಯಾಂಕ್‌ ಜೆ.ಪಿ. ಮೋರ್ಗನ್‌ನಲ್ಲಿ 12.15 ಕೋಟಿ ರೂ. ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಜಮೀನು, ಮನೆ, ಚಿನ್ನಾಭರಣಗಳನ್ನು ಖರೀದಿಸಿದ್ದರು. ಬ್ಯಾಂಕ್‌ನಲ್ಲಿ ಲಪಟಾಯಿಸಿದ್ದ ಹಣದಲ್ಲಿ 8,14,90, 448 ನಗದು ದೊಡ್ಡಬಳ್ಳಾಪುರದಲ್ಲಿ ಖರೀದಿಸಿದ್ದ ಮೂರು ಎಕರೆ ಜಮೀನು, ಕೊತ್ತನೂರಿನಲ್ಲಿ ಖರೀದಿ ಮಾಡಿದ್ದ ನಾಲ್ಕು ಮಹಡಿಯ ಕಟ್ಟಡ, 470 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಇವರು ನಕಲಿ ಶೈಕ್ಷಣಿಕ ದಾಖಲಾತಿ ನೀಡಿ ಉದ್ಯೋಗಕ್ಕೆ ಸೇರಿದ್ದರು.

ಬ್ಯಾಂಕ್ ಮ್ಯಾನೇಜರ್ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ, ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ ಮಾರುತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ, ಸುರೇಶ್ ಬಾಬು ಜೊತೆ ಸೇರಿ ಬ್ಯಾಂಕಿನ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದನ್ನು ಬಾಯಿಬಿಟ್ಟಿದ್ದಾನೆ ಎಂದರು. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಾರತ್ ಹಳ್ಳಿ ಪೊಲೀಸ್ ಠಾಣೆಯ ಸಬ್‌ಇನ್ಸಪೆಕ್ಟರ್ ಎಂ. ಮುನಿರಾಜು, ಮತ್ತು ಸಿಬ್ಬಂದಿಗಳಿಗೆ 50ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ತಿಳಿಸಿದರು.

Get Latest updates on WhatsApp. Send ‘Add Me’ to 8550851559

Loading...