ಮುಖ್ಯಮಂತ್ರಿಗಳಿಂದ ರಾಜಕೀಯವಾಗಿ ಕನ್ನಡ ಸಂಘಟನೆಗಳ ದುರ್ಬಳಕೆ

ಬೆಂಗಳೂರು: ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿರುವುದಕ್ಕೆ ಬಿಜೆಪಿ ಮುಖಂಡ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಹುಲ್ ಬಂದಾಗ ನಾವೂ ಹಾಗೆಯೇ ಮಾಡಬೇಕಾಗುತ್ತದೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅಶೋಕ್, ಕನ್ನಡದ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿಗಳು, ವಿರೋಧ ಪಕ್ಷಗಳನ್ನು ಹಣಿಯಲು ಕನ್ನಡಪರ ಸಂಘಟನೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರದ ದರ್ಪದಿಂದ ಮುಖ್ಯಮಂತ್ರಿಗಳು ಹೀಗೇ ವರ್ತಿಸಿದರೆ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬಂದಾಗಲೂ ನಾವು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಂಗಳೂರು ಕ್ರೈಮ್ ಸಿಟಿಯಾಗಿ ಬದಲಾಗಿದೆ. ಕೆಂಪಯ್ಯ ಮತ್ತು ರಾಮಲಿಂಗಾರೆಡ್ಡಿಯವರ ನೇತೃತ್ವದಲ್ಲಿ ವರ್ಗಾವಣೆ ಎಗ್ಗಿಲ್ಲದೆ ನಡೆಯುತ್ತಿದೆ. ಮೂರು ತಿಂಗಳಿಗೊಮ್ಮೆ ವರ್ಗಾವಣೆ ನಡೆಯುತ್ತಿದೆ. ಜನ ಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರು ಮನೆಯಿಂದ ಹೊರಬಂದು ರಂಗೋಲಿ ಹಾಕಲು ಪೊಲೀಸ್ ಠಾಣೆಗೆ ಫೋನ್ ಮಾಡಿ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಜನವರಿ 25 ರಂದು ಚುನಾವಣೆ ಸಿದ್ಧತೆಗಳನ್ನು ಪರಿಶೀಲಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭವು ಫೆಬ್ರವರಿ 4 ರಂದು ನಡೆಯಲಿದ್ದು, ಆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಕನ್ನಡಪರ ಸಂಘಟನೆಗಳು ಜನವರಿ 25 ರಂದು ರಾಜ್ಯ ಬಂದ್ ಮತ್ತು ಫೆಬ್ರವರಿ 4 ರಂದು ಬೆಂಗಳೂರು ಬಂದ್ ಗೆ ಕರೆ ನೀಡಿವೆ.

Get Latest updates on WhatsApp. Send ‘Subscribe’ to 8550851559