ಟಿಬೆಟ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಿದ ಚೀನಾ

ಭಾರತದ ವಿರುದ್ಧ ಯುದ್ಧಕ್ಕೆ ಚೀನಾ ಸಿದ್ಧವಾಗುತ್ತಿದೆ ಎಂಬ ಮಾತುಗಳು ಒಂದು ಕಡೆ ಕೇಳಿಬರುತ್ತಿವೆ. ಮತ್ತೊಂದೆಡೆ ಇದಕ್ಕೆ ಇಂಬು ಕೊಡುವಂತೆ ಟಿಬೆಟ್ ನಲ್ಲಿ ಭಾರೀ ಪ್ರಮಾಣದಲ್ಲಿ ಮಿಲಿಟರಿ ಸಾಮಗ್ರಿ, ವಾಹನಗಳನ್ನು ಚೀನಾ ಕಲೆಹಾಕಿದೆ. ಸಿಕ್ಕಿಂ ಗಡಿಯಲ್ಲಿ ಉದ್ವಿಘ್ನ ವಾತಾವರಣ ನೆಲೆಸಿರುವ ಸಮಯದಲ್ಲಿ ಜೂನ್ ತಿಂಗಳಾಂತ್ಯದಲ್ಲಿ ಅಲ್ಲಿಗೆ ಚೀನಾ ತನ್ನ ಸೇನೆಯನ್ನು ಕಳುಹಿಸಿದ್ದಾಗಿ ಚೀನಾ ಮಾಧ್ಯಮಗಳು ವರದಿ ಮಾಡಿವೆ. ರಸ್ತೆ, ರೈಲ್ವೇ ಮಾರ್ಗಗಳ ಮೂಲಕ ಟನ್ ಗಟ್ಟಲೆ ಮಿಲಿಟರಿ ಸಾಮಗ್ರಿಯನ್ನು ಟಿಬೆಟ್ ಗೆ ಕಳುಹಿಸಿದೆ.

ಈಗಾಗಲೇ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ಭಾರಿ ಚೀನಾ ಮಾದ್ಯಮ ಭಾರತವನ್ನು ಎಚ್ಚರಿಸಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಯುದ್ಧಕ್ಕೂ ಚೀನಾ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಂತಹ ಉದ್ವಿಘ್ನ ವಾತಾವರಣದಲ್ಲಿಯೇ ಇತ್ತೀಚೆಗೆ ಚೀನಾ, ಅರುಣಾಚಲ ಪ್ರದೇಶ ಸಮೀಪ ಮಿಲಿಟರಿ ಡ್ರಿಲ್ ನಡೆಸಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋಗಳನ್ನೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಬಿಡುಗಡೆ ಮಾಡಿತ್ತು.