ಅಮೆರಿಕಾ ಎಚ್ಚರಿಕೆಯ ಬೆನ್ನಲ್ಲೇ ಪಾಕ್ ಬೆಂಬಲಕ್ಕೆ ನಿಂತ ಚೀನಾ – News Mirchi

ಅಮೆರಿಕಾ ಎಚ್ಚರಿಕೆಯ ಬೆನ್ನಲ್ಲೇ ಪಾಕ್ ಬೆಂಬಲಕ್ಕೆ ನಿಂತ ಚೀನಾ

ಬೀಜಿಂಗ್: ಭಯೋತ್ಪಾದನೆಗೆ ಬೆಂಬಲಿಸುವ ವಿಷಯದಲ್ಲಿ ತನ್ನ ವರ್ತನೆ ಬದಲಿಸಿಕೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಚೀನಾ ಪಾಕ್ ಬೆಂಬಲಕ್ಕೆ ನಿಂತಿದೆ. ಅಮೆರಿಕಾ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ. ವಿಶ್ವದ ಎಲ್ಲಾ ದೇಶಗಳೂ ಪಾಕಿಸ್ತಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಚೀನಾ ವಿದೇಶಾಂಗ ಇಲಾಖೆಯ ಅಧಿಕೃತ ವಕ್ತಾರ ಹುವಾ ಚುನಿಯಿಂಗ್ ಮಂಗಳವಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ದೇಶಗಳಲ್ಲಿ ಪಾಕ್ ಮುಂಚೂಣಿಯಲ್ಲಿದೆ, ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಆ ದೇಶ ಸಾಕಷ್ಟು ತ್ಯಾಗ ಮಾಡಿದೆ. ಶಾಂತಿ, ಸ್ಥಿರತೆಗಾಗಿ ಸದಾ ಶ್ರಮಿಸುತ್ತಿದೆ. ಅಂತ ಪಾಕಿಸ್ತಾನವನ್ನು ಅಂತರಾಷ್ಟ್ರೀಯ ಸಮುದಾಯ ಗುರುತಿಸಬೇಕು. ಅಮೆರಿಕಾ ಪಾಕಿಸ್ತಾನಗಳು ಒಟ್ಟಾಗಿ ಹೋರಾಡಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ಚುನಿಯಾಂಗ್ ಹೇಳಿದ್ದಾರೆ.

ಇದಕ್ಕೂ ಮುನ್ನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕ್ ಉಗ್ರರಿಗೆ ಸ್ವರ್ಗವಾಗಿ ಬದಲಾಗಿದ್ದು, ಪಾಕ್ ತನ್ನ ನಡುವಳಿಗೆ ಬದಲಿಸಿಕೊಳ್ಳದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇತ್ತೀಚೆಗೆ ಚೀನಾದೊಂದಿಗೆ ಪಾಕಿಸ್ತಾನ ಆರ್ಥಿಕ, ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಸಂಬಂಧಗಳನ್ನು ವೃದ್ಧಿಗೊಳಿಸಿಕೊಳ್ಳುತ್ತಿದೆ. ಹಲವು ಬಾರಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡುತ್ತಿದ್ದ ಚೀನಾ, ಇದೀಗ ಮತ್ತೊಮ್ಮೆ ಪಾಕಿಸ್ತಾನದ ಪರ ಮಾತನಾಡಿದೆ.

Loading...