ಭಾರತ ಚೀನಾ ನಡುವೆ ಮಾತಿನ ಸಮರ: ನಾವೂ ಅಂದಿನ ಚೀನಾ ಅಲ್ಲವೆಂದ ಚೀನಾ…

ಭಾರತ – ಚೀನಾ ನಡುವೆ ಮಾತಿನ ಸಮರ ಮುಂದುವರೆಯುತ್ತಿದೆ. ಸಿಕ್ಕಿ ಗಡಿಯಲ್ಲಿ ಒಂದು ತಿಂಗಳಿನಿಂದ ಉಭಯ ದೇಶಗಳ ನಡುವಿನ ಘರ್ಷಣೆಗಳಿಂದ ಉದ್ವಿಘ್ನ ವಾತಾವರಣ ನೆಲೆಸಿದೆ. ಈಗಿರುವ ಭಾರತ 1962 ರ ಭಾರತವಲ್ಲ ಎಂಬ ಅರುಣ್ ಜೇಟ್ಲಿ ಅವರ ಹೇಳಿಕೆಗೆ ಚೀನಾ ಪ್ರತಿಕ್ರಿಯಿಸಿದೆ. ಜೇಟ್ಲಿ ಸರಿಯಾಗಿಯೇ ಹೇಳಿದ್ದಾರೆ, 1962ಕ್ಕಿಂತಲೂ 2017 ರ ಭಾರತ ವಿಭಿನ್ನವಾಗಿದೆ. ಆದರೆ ಚೀನಾ ಕೂಡಾ ಅಂದಿನ ಚೀನಾ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಗೆಂಗ್ ಶುವಾಂಗ್ ಎಚ್ಚರಿಸಿದ್ದಾರೆ.

1890 ರ ಚೀನಾ-ಬ್ರಿಟೀಷ್ ಒಪ್ಪಂದವನ್ನು ಉಲ್ಲಂಘಿಸಿ ಭಾರತೀಯ ಸೇನೆ ವಂಚಿಸುತ್ತಿದೆ. ನಿಯಮಗಳಿಗೆ ವಿರುದ್ಧವಾಗಿ ತಮ್ಮ ಭೂಭಾಗದೊಳಗೆ ಅತಿಕ್ರಮ ಪ್ರವೇಶ ಮಾಡಿದೆ ಎಂದು ಆರೋಪಿಸಿದ್ದಾರೆ. ಕೂಡಲೇ ಭಾರತ ತನ್ನ ಸೇನಾ ಪಡೆಗಳನ್ನು ಅಲ್ಲಿಂದ ಹಿಂದೆ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಭೌಗೋಳಿಕ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ಚೀನಾ ತೆಗೆದುಕೊಳ್ಳುತ್ತದೆ ಎಂದು ಚೀನಾ ಪರೋಕ್ಷವಾಗಿ ಭಾರತದೊಂದಿಗೆ ಯುದ್ಧಕ್ಕೂ ಸಿದ್ಧ ಎಂಬ ಎಚ್ಚರಿಕೆ ನಿಡಿದೆ.

ಸಿಕ್ಕಿ ಪ್ರದೇಶದಲ್ಲಿ ಭಾರತ-ಚೀನಾ ದೇಶಗಳ ನಡುವಿನ ಗಡಿಗಳು ಹಿಂದೆ ತೀರ್ಮಾನಿಸಿದ್ದಂತೆಯೇ ಇವೆ. ನಮ್ಮ ಭೂಪ್ರದೇಶಕ್ಕೆ ಪ್ರವೇಶಿಸುವುದು, ನಮ್ಮ ಸೈನಿಕರ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಮೂಲಕ ಅಂತರಾಷ್ಟ್ರೀಯ ಗಡಿ ನಿಯಮಗಳನ್ನು ಭಾರತ ಉಲ್ಲಂಘಿಸುತ್ತಿದೆ. ಆ ಮೂಲಕ ಗಡಿಯಲ್ಲಿ ಶಾಂತಿಗೆ ಭಂಗವುಂಟು ಮಾಡುತ್ತಿದೆ, ಕೂಡಲೇ ಭಾರತೀಯ ಸೇನೆ ಇಲ್ಲಿಂದೆ ಹಿಂದೆ ಹೋಗಬೇಕು ಎಂದು ಗೆಂಗ್ ಹೇಳಿದ್ದಾರೆ.

ಸಿಕ್ಕಿಂ ಗೆ ಸಂಬಂಧಿಸಿದಂತೆ 1890 ರ ಚೀನಾ-ಬ್ರಿಟೀಷ್ ಒಪ್ಪಂದವನ್ನು ಅಂಗೀಕರಿಸುತ್ತಾ ಭಾರತದ ಮೊದಲ ಪ್ರಧಾನಿ ನೆಹರೂ 1959 ರಲ್ಲಿ ಚೀನಾ ಪ್ರಧಾನಿ ಚೌ ಎನ್ಲೈ ಗೆ ಪತ್ರ ಬರೆದಿದ್ದರು. ನಂತರದ ಎಲ್ಲಾ ಪ್ರಧಾನಿಗಳು ಅದನ್ನು ಗೌರವಿಸುತ್ತಾ ಬಂದಿದ್ದರು. ಆದರೆ ಇತ್ತೀಚೆಗೆ ಸಿಕ್ಕಿಂ ಗಡಿಯಲ್ಲಿ ಭಾರತ ತೆಗೆದುಕೊಂಡ ಕ್ರಮ ವಂಚನೆಯಿಂದ ಕೂಡಿದೆ. ರಾಜತಾಂತ್ರಿಕವಾಗಿ ಈ ಸಮಸ್ಯೆಯನ್ನು ಬಗೆಹರಿಸಕೊಳ್ಳಲು ಬಾಗಿಲು ತೆರೆದೇ ಇದೆ ಎಂದು ಹೇಳಿರುವ ಗೆಂಗ್, ಭೂತಾನ್ ನನ್ನು ಭಾರತ ತನ್ನ ರಕ್ಷಣಾ ಕವಚವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.