ಬ್ರಿಕ್ಸ್ ಒಕ್ಕೂಟ ವಿಸ್ತರಿಸುವ ಚೀನಾ ಕುತಂತ್ರ ವಿಫಲ – News Mirchi

ಬ್ರಿಕ್ಸ್ ಒಕ್ಕೂಟ ವಿಸ್ತರಿಸುವ ಚೀನಾ ಕುತಂತ್ರ ವಿಫಲ

ಡೊಕ್ಲಾಂ ವಿಚಾರದಲ್ಲಿ ಭಾರತದ ವಿರುದ್ಧ ಹಲವಾರು ಬೆದರಿಕೆ ತಂತ್ರಗಳನ್ನು ಅನುಸರಿಸಿ ವಿಫಲವಾಗಿ ಕೊನೆಗೂ ಹಿಂದೆ ಸರಿದ ಚೀನಾಕ್ಕೆ ಭಾರತ ಮತ್ತೊಂದು ಶಾಕ್ ನೀಡಿದೆ. ಬ್ರಿಕ್ಸ್ ಒಕ್ಕೂಟದಲ್ಲಿ ತನಗೆ ಬೇಕಿರುವ ದೇಶಗಳಿಗೆ ಸ್ಥಾನ ಕಲ್ಪಿಸಲು ಅನುಕೂಲವಾಗುವಂತೆ ಹೊಸ ದೇಶಗಳಿಗೆ ಒಕ್ಕೂಟದಲ್ಲಿ ಸದಸ್ಯ ನೀಡುವ ಚೀನಾ ಪ್ರಸ್ತಾಪಕ್ಕೆ ಭಾರತ ಅಡ್ಡಿಪಡಿಸಿದೆ. ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಸದಸ್ಯರಾಗಿರುವ ಬ್ರಿಕ್ಸ್ ಒಕ್ಕೂಟದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಚೀನಾ ಯೋಜಿಸಿತ್ತು. ಇದರ ಭಾಗವಾಗಿಯೇ ಅದು ಬ್ರಿಕ್ಸ್ ಒಕ್ಕೂಟವನ್ನು ಬ್ರಿಕ್ಸ್ ಪ್ಲಸ್ ಒಕ್ಕೂಟವಾಗಿ ಬದಲಾಯಿಸಿ ಹೊಸ ರಾಷ್ಟ್ರಗಳಿಗೆ ಸದಸ್ಯತ್ವ ನೀಡಲು ಪ್ರಸ್ತಾಪ ಇಟ್ಟಿತ್ತು. ಆದರೆ ಭಾರತ ಮತ್ತು ಇತರೆ ಸದಸ್ಯ ರಾಷ್ಟ್ರಗಳನ್ನು ಈ ವಿಷಯದಲ್ಲಿ ಅದು ಮನವೊಲಿಸಲು ವಿಫಲವಾಗಿದೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಚೀನಾ ವಿದೇಶಾಂಗ ಸಚಿವರು, ಬ್ರಿಕ್ಸ್ ಒಕ್ಕೂಟವನ್ನು ವಿಸ್ತರಿಸುವ ವಿಷಯದಲ್ಲಿ ಒಕ್ಕೂಟದ ಇತರೆ ದೇಶಗಳನ್ನು ಮನವೊಲಿಸಲು ವಿಫಲವಾಗಿರುವ ಸೂಚನೆ ನೀಡಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಾಬಲ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎದುರಿಸಲು ಬ್ರಿಕ್ಸ್ ಒಕ್ಕೂಟವನ್ನು ವಿಸ್ತರಿಸಬೇಕು ಎಂದು ಚೀನಾ ಮೇಲ್ನೋಟಕ್ಕೆ ಹೇಳುತ್ತಿದೆ. ಆದರೆ ತನ್ನ ವಾಣಿಜ್ಯ ವ್ಯವಹಾರಗಳನ್ನು ವೃದ್ಧಿಗೊಳಿಸಿಕೊಳ್ಳುವ ಸಲುವಾಗಿಯೇ ಚೀನಾ ಈ ವಿಸ್ತರಣೆ ನಾಟಕವಾಡುತ್ತಿದೆ ಎಂದು ಭಾರತ ಸೇರಿದಂತೆ ಇತರೆ ಬ್ರಿಕ್ಸ್ ರಾಷ್ಟ್ರಗಳು ಅರ್ಥ ಮಾಡಿಕೊಳ್ಳಲು ಕಷ್ಟವಾಗಲಿಲ್ಲ. ಸೆಪ್ಟೆಂಬರ್ 3 ಮತ್ತು 4 ರಂದು ಚೀನಾದಲ್ಲಿನ ಜಿಯಾಮೆನ್ ನಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಸದಸ್ಯ ದೇಶಗಳು ಒಪ್ಪಿದರೆ ಈ ಶೃಂಗಸಭೆಯಲ್ಲಿಯೇ ಹೊಸ ದೇಶಗಳನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಬೇಕು ಎಂದು ಚೀನಾ ಯೋಜಿಸಿತ್ತು. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಒಕ್ಕೂಟಕ್ಕೆ ಸೇರದ ಐದು ದೇಶಗಳನ್ನೂ ಆಹ್ವಾನಿಸಿದೆ.

ಒಂದೊಂದು ಖಂಡದಿಂದ ಒಂದು ದೇಶದಂತೆ ಥಾಯ್ಲೆಂಡ್, ಈಜಿಫ್ಟ್, ತಝಕಿಸ್ತಾನ, ಮೆಕ್ಸಿಕೋ, ಗಿನಿಯಾಗಳಿಗೆ ಚೀನಾ ಈ ಶೃಂಗಸಭೆಗೆ ಆಹ್ವಾನ ನೀಡಿದೆ. ಚೀನಾ ಕೈಗೊಂಡ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಲ್ಲಿ ಈ ದೇಶಗಳು ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ. ಚೀನಾಕ್ಕೆ ಹೆಚ್ಚು ಆತ್ಮೀಯವಾಗುತ್ತಿರುವ ಪಾಕಿಸ್ತಾನಕ್ಕೆ ಮಾತ್ರ ಈ ಶೃಂಗಸಭೆಗೆ ಆಗಮಿಸುವಂತೆ ಚೀನಾ ಆಹ್ವಾನ ನೀಡದಿರುವುದೂ ಆಶ್ಚರ್ಯ ಮೂಡಿಸಿದೆ. ಗೋವಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಗೆ ಭಾರತವೂ ಅಕ್ಕಪಕ್ಕದ ದೇಶಗಳನ್ನು ಆಹ್ವಾನಿಸಿತ್ತು. ಮೊದಲು ನಾಲ್ಕು ದೇಶಗಳ ಒಕ್ಕೂಟವಾಗಿದ್ದ “ಬ್ರಿಕ್”(BRIC), ದಕ್ಷಿಣ ಆಫ್ರಿಕಾ ಸೇರ್ಪಡೆಯಾದ ನಂತರ “ಬ್ರಿಕ್ಸ್”(BRICS) ಆಗಿ ಬದಲಾಯಿತು.

[ಇದನ್ನೂ ಓದಿ: ಡೊಕ್ಲಾಮ್ ವಿವಾದಕ್ಕೆ ತೆರೆ, ಸೇನೆ ಹಿಂತೆಗೆದಕ್ಕೆ ಚೀನಾ-ಭಾರತ ಅಂಗೀಕಾರ]

ಬ್ರಿಕ್ಸ್ ಒಕ್ಕೂಟದಲ್ಲಿನ ಈ ಐದೂ ದೇಶಗಳಲ್ಲಿ ವಿಶ್ವದಲ್ಲಿನ ಶೇ.40 ರಷ್ಟು ಜನಸಂಖ್ಯೆ ವಾಸವಿದೆ. 2020 ರ ವೇಳೆಗೆ ಕೇವಲ ಬ್ರೆಜಿಲ್, ಈನಾ ಮತ್ತು ಭಾರತದಗಳ ಜಿಡಿಪಿ, ಪಾಶ್ಚಿಮಾತ್ಯ ದೇಶಗಳ ಜಿಡಿಪಿಯನ್ನು ಮೀರುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆ ಈ ಹಿಂದೆಯೇ ಹೇಳಿತ್ತು. 2050 ರ ವೇಳೆಗೆ ಬ್ರಿಕ್ಸ್ ದೇಶಗಳ ಜಿಡಿಪಿ 128.4 ಲಕ್ಷ ಕೋಟಿ ಡಾಲರ್ ಗೆ ಏರಿಕೆಯಗಲಿದೆ ಎಂದು ಅಂದಾಜಿಸಲಾಗಿದೆ.

Loading...