ವಿಮಾನವೇರಲು ಬಂದ ಅಜ್ಜಿ ಮಾಡಿದ ಆ ಸಣ್ಣ ತಪ್ಪು… – News Mirchi

ವಿಮಾನವೇರಲು ಬಂದ ಅಜ್ಜಿ ಮಾಡಿದ ಆ ಸಣ್ಣ ತಪ್ಪು…

ಸುಮ್ಮನೆ ವಿಮಾನ ಏರುವ ಬದಲು, ಅಜ್ಜಿಯೊಬ್ಬಳು ಮಾಡಿದ ಸಣ್ಣ ತಪ್ಪಿನಿಂದ  ಇನ್ನೇನು ಹಾರಲು ಸಿದ್ದವಿದ್ದ‌ ವಿಮಾನ ಹಠಾತ್ತನೆ ನಿಲ್ಲಿಸಬೇಕಾಗಿ ಬಂದ ಘಟನೆ ಚೀನಾದಲ್ಲಿ ನಡೆದಿದೆ. ವಿಮಾನದ ಇಂಜಿನ್ ನನ್ನು ಬಿಚ್ಚಿ ರಿಪೇರಿ ಮಾಡಿದ ನಂತರವೇ ವಿಮಾನ ಹಾರಿದ್ದು. ಇದಕ್ಕೆಲ್ಲಾ ಕಾರಣವಾದ ಅಜ್ಜಿಯನ್ನು ಕೊನೆಗೆ ಬಂಧಿಸಬೇಕಾಯಿತು. ಇಷ್ಟಕ್ಕೂ ಆ ಅಜ್ಜಿ ಮಾಡಿದ್ದಾದರೂ ಏನು ಅಂತೀರಾ…? ಕೇಳಿ…

ಶಾಂಘೈ ಪುಡೋಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೀನಾದ ವಿಮಾನ ಸಿ.ಜೆಡ್-380 ಗಾಂಗ್ಜೌ ನಗರಕ್ಕೆ ಹೋಗಲು ಸಿದ್ಧವಾಗಿತ್ತು. ಗಾಂಗ್ಜೌಗೆ ಹೋಗಲು 80 ವರ್ಷದ ಅಜ್ಜಿಯೊಬ್ಬಳು ತನ್ನ ಪತಿ, ಮಗಳು ಮತ್ತು ಅಳಿಯನೊಂದಿಗೆ ವಿಮಾನವೇರಲು ಬಂದಿದ್ದರು. ಆಕೆಗೆ ಅತೀತ ಶಕ್ತಿಗಳ ಮೇಲೆ ನಂಬಿಕೆ ಹೆಚ್ಚು. ಹೀಗಾಗಿ ತನಗೆ ಒಳ್ಳೆಯದಾಗುತ್ತೆ ಎಂದು ಒಂಬತ್ತು ನಾಣ್ಯಗಳನ್ನು ವಿಮಾನದ ಇಂಜಿನ್ ಒಳಗೆ ಎಸೆದೇ ಬಿಟ್ಟಳು. ಅದನ್ನು ನೋಡಿದ ಪ್ರಯಾಣಿಕನೊಬ್ಬ ಸಿಬ್ಬಂದಿಗೆ ಹೇಳಿದ್ದು, ನಂತರ ವಿಮಾನವನ್ನು ಕೆಲ ಕಾಲ ನಿಲ್ಲಿಸಿ, ಅದಾಗಲೇ ವಿಮಾನದಲ್ಲಿ ಕೂತಿದ್ದ 150 ಜನರನ್ನು ಇದ್ದಕ್ಕಿದ್ದಂತೆ ಕೆಳಕ್ಕಿಳಿಸಬೇಕಾಯಿತು.

ಮೊದಲು ಇಂಜಿನ್ ನಲ್ಲಿ ಹುಡುಕಿದ ಸಿಬ್ಬಂದಿಗೆ ಎಂಟು ನಾಣ್ಯಗಳು ಮಾತ್ರ ಪತ್ತೆಯಾದವು. ಮತ್ತೊಂದು ನಾಣ್ಯಕ್ಕಾಗಿ ಇಂಜಿನ್ ಭಾಗವನ್ನು ಸಂಪೂರ್ಣ ಬಿಚ್ಚಿ ನೋಡಿದಾಗ ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಮತ್ತೊಂದು ನಾಣ್ಯ ಕಾಣಿಸಿತು. ನಂತರ ನಿರಾಳರಾದ ಸಿಬ್ಬಂದಿ, ವಿಮಾನವನ್ನು ಕಳುಹಿಸಿದರು. ಅಷ್ಟರೊಳಗೆ ಕೆಲ ಗಂಟೆಗಳೇ ಸರಿದು ಹೋಗಿದ್ದವು. ನಂತರ ಅಜ್ಜಿಯ ಕುಟುಂಬವನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

Contact for any Electrical Works across Bengaluru

Loading...
error: Content is protected !!