ಟಿಡಿಪಿ ಸೇರಲಿರುವ ಚಿರಂಜೀವಿ, ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ?

ರಾಜ್ಯ ವಿಭಜನೆಯ ನಂತರ ಆಂಧ್ರಪ್ರದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ. ಆಂಧ್ರದಲ್ಲಿ ಹೊಸ ಪಕ್ಷ ‘ಪ್ರಜಾರಾಜ್ಯಂ’ ಪಕ್ಷ ಕಟ್ಟಿ ನಂತರ ಅದನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದ್ದ ತೆಲುಗು ಚಿತ್ರ ನಟ ಮೆಗಾಸ್ಟಾರ್ ಚಿರಂಜೀವಿ, ಇದೀಗ ತೆಲುಗುದೇಶಂ ಪಕ್ಷದ ಸೈಕಲ್ ಏರಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವು ಕಾಂಗ್ರೆಸ್ ಮುಖಂಡರು ಪಕ್ಷ ತೊರೆದಿದ್ದು ಚಿರಂಜೀವಿ ನಡೆಯಿಂದ ಕಾಂಗ್ರೆಸ್ ಗೆ ಗಾಯದ ಮೇಲೆ ಬರೆ ಎಳೆದಂತೆಯೇ ಸರಿ.

ಕಾಂಗ್ರೆಸ್ ಸೇರಿ ಕೇಂದ್ರ ಸಚಿವರಾಗಿದ್ದ ಚಿರಂಜೀವಿ, ಕೈ ಅಧಿಕಾರ ಕಳೆದುಕೊಂಡ ನಂತರ ರಾಜಕಾರಣದಿಂದ ಸ್ವಲ್ಪ ದೂರವೇ ಉಳಿದಿದ್ದರು. ಈ ಸಮಯದಲ್ಲಿ ಚಿತ್ರವೊಂದರಲ್ಲಿ ನಟಿಸಲೂ ಮುಂದಾಗಿದ್ದಾರೆ. ಆದರೆ ಈಗ ಸಿನಿಮಾ ಜೊತೆಗೆ ರಾಜಕಾರಣದಲ್ಲೂ ಮತ್ತೆ ಮುಂದುವರೆಯಲು ಇಚ್ಛಿಸಿದ್ದಾರೆ. ಹೀಗಾಗಿ ಅವರು ಟಿಡಿಪಿ ನಾಯಕರೊಂದಿಗೆ ಪಕ್ಷ ಸೇರ್ಪಡೆ ಕುರಿತು ಚರ್ಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ಟಿಡಿಪಿ ಸೇರಲು ಚಿರಂಜೀವಿ ಕೆಲ ಷರತ್ತು ವಿಧಿಸಿದ್ದಾರೆ ಎನ್ನಲಾಗುತ್ತಿದೆ. ತಮ್ಮನ್ನು ರಾಜ್ಯಸಭೆಗೆ ಕಳುಹಿಸುವುದು, ತಾವು ಕೇಳಿದ ಏಳು ಜನರಿಗೆ ಪಕ್ಷದಿಂದ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದೂ ಸೇರಿದಂತೆ ಕೇಂದ್ರ ಸಚಿವ ಸ್ಥಾನ ಕೊಡಿಸುವ ಒತ್ತಾಯವೂ ಮಾಡಿದ್ದಾರೆ ಎನ್ನಲಾಗಿದೆ.

Pawan kalyanಇನ್ನು 2019 ರ ವಿಧಾನ ಸಭೆ ಚುನಾವಣೆಯಲ್ಲಿ ಚಿರಂಜೀವಿಯವರ ಸಹೋದರ ಪವನ್ ಕಲ್ಯಾಣ್ ಸ್ಥಾಪಿಸಿದ ಜನಸೇನಾ ಪಕ್ಷ ಸ್ಪರ್ಧಿಸುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ, ಚಿರಂಜೀವಿ ಪಕ್ಷ ಸೇರ್ಪಡೆ ಮಾಡಿಕೊಳ್ಳುವುದು ಉತ್ತಮ ಎಂದು ನಿರ್ಧರಿಸಿರುವ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಚಿರಂಜೀವಿ ಷರತ್ತುಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್ ಮೂಲಗಳು ಮಾತ್ರ ಚಿರಂಜೀವಿ ಪಕ್ಷದಲ್ಲೇ ಉಳಿಯಲಿದ್ದಾರೆ ಎನ್ನುತ್ತಿದ್ದಾರೆ.