ವಾಟ್ಸಾಪ್ ನಲ್ಲಿ ಇಸ್ಲಾಮ್ ವಿರೋಧಿ ಕವಿತೆ ಕಳುಹಿಸಿದ ಕ್ರೈಸ್ತ ಯುವಕನಿಗೆ ಗಲ್ಲು

View Later

ಮುಸ್ಲಿಂ ಸ್ನೇಹಿತನಿಗೆ ವಾಟ್ಸಾಪ್ ಮೂಲಕ ಇಸ್ಲಾಮ್ ವಿರೋಧಿ ಕವಿತೆಯನ್ನು ಕಳುಹಿಸಿದ ಕ್ರಿಶ್ಚಿಯನ್ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ನದೀಮ್ ಜೇಮ್ಸ್ ಶಿಕ್ಷೆಗೊಳಗಾದ ಕ್ರಿಶ್ಚಿಯನ್ ವ್ಯಕ್ತಿ. ತನ್ನ ಸ್ನೇಹಿತ ತನಗೆ ಕವಿತೆಯೊಂದನ್ನು ಕಳುಹಿಸಿದ್ದು, ಅದು ಪ್ರವಾದಿ ಮೊಹಮದ್ ರನ್ನು ಅವಹೇಳನ ಮಾಡಿದಂತೆ ಇದೆ ಎಂದು ನದೀಮ್ ಜೇಮ್ಸ್ ಸ್ನೇಹಿತ ಯಾಸಿರ್ ಬಷೀರ್ ಆರೋಪಿಸಿದ್ದ. ಈ ಹಿನ್ನೆಲೆಯಲ್ಲಿ ಜುಲೈ 2016 ರಲ್ಲಿ ಆರೋಪಿಯ ಬಂಧನವಾಗಿತ್ತು.

ನದೀಮ್ ಜೇಮ್ಸ್ ಮತ್ತು ಕುಟುಂಬದವರಿಗೆ ಸ್ಥಳೀಯರಿಂದ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಜೈಲಿನಲ್ಲಿ ವಿಚಾರಣೆ ನಡೆಸಲಾಯಿತು. ಪ್ರವಾದಿ ಮೊಹಮದ್ ರನ್ನು ಅವಹೇಳನ ಮಾಡುವುದು ಪಾಕಿಸ್ತಾನದಲ್ಲಿ ಮರಣದಂಡನೆ ವಿಧಿಸಬಹುದಾದಂತಹ ಅಪರಾಧ.

ತೀರ್ಪು ಪ್ರಶ್ನಿಸಿ ಲಾಹೋರ್ ಹೈಕೋರ್ಟ್ ಮೆಟ್ಟಿಲೇರುವುದಾಗಿ ಆರೋಪಿ ಪರ ವಕೀಲರು ಹೇಳಿದ್ದಾರೆ. ಮುಸ್ಲಿಂ ಯುವತಿಯೊಂದಿಗೆ ಆರೋಪಿ ಹೊಂದಿದ್ದ ಸಂಬಂಧದ ಹಿನ್ನೆಲೆಯಲ್ಲಿ ಆತನ ಸ್ನೇಹಿತ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಆರೋಪ ಮಾಡಿದ್ದಾನೆ ಎಂದು ಆರೋಪಿ ನದೀಮ್ ಜೇಮ್ಸ್ ಪರ ವಕೀಲರು ಹೇಳುತ್ತಿದ್ದಾರೆ.

ಮುಸ್ಲಿಂ ಬಹುಸಂಖ್ಯಾತರಾಗಿರುವ ಪಾಕಿಸ್ತಾನದಲ್ಲಿ ಸುಮಾರು 20 ಲಕ್ಷ ಕ್ರೈಸ್ತರಿದ್ದಾರೆ. ಧರ್ಮನಿಂದನೆ ಹೆಸರಲ್ಲಿ ಮೂಲಭೂತವಾದಿಗಳು, ಉಗ್ರಗಾಮಿಗಳು ಆಗಾಗ ಅಲ್ಪಸಂಖ್ಯಾತ ಕ್ರೈಸ್ತರ ಮೇಲೆ ದಾಳಿ ನಡೆಸುವುದು ಇಲ್ಲಿ ಸಾಮಾನ್ಯವಾಗಿದೆ. 2015 ರಲ್ಲಿ ಕುರಾನ್ ಅನ್ನು ಅವಮಾನಿಸಿದರೆಂದು ಇಬ್ಬರು ಕ್ರೈಸ್ತ ದಂಪತಿಗಳನ್ನು ಇಟ್ಟಿಗೆ ಗೂಡಿನಲ್ಲಿ ಹಾಕಿ ಸುಟ್ಟಿದ್ದರು. ಧರ್ಮನಿಂದನೆ ಆರೋಪದ ಮೇಲೆ ಎರಡು ವರ್ಷಗಳ ಹಿಂದೆ ಲಾಹೋರ್ ನಲ್ಲಿ 125 ಕ್ರೈಸ್ತರ ಮನೆಗಳನ್ನು ಸುಟ್ಟಿದ್ದರು.

Get Latest updates on WhatsApp. Send ‘Add Me’ to 8550851559