ವಾಟ್ಸಾಪ್ ನಲ್ಲಿ ಬರುವ ಲಿಂಕ್ ಕ್ಲಿಕ್ ಮಾಡುವಾಗ ಎಚ್ಚರ

ವಾಟ್ಸಾಪ್ ನಲ್ಲಿ ಪ್ರತಿದಿನ ವಿವಿಧ ಗ್ರೂಪ್ ಗಳಲ್ಲಿ ನೂರಾರು ಜನ ಸಂದೇಶ ಕಳುಹಿಸುತ್ತಿರುತ್ತಾರೆ. ಕೆಲವರು ವಿವಿಧ ರೀತಿಯ ಲಿಂಕ್ ಗಳನ್ನು ಕಳುಹಿಸುತ್ತಾ ಏನೇನೋ ಆಫರ್ ಗಳಿವೆ ಎಂದು ಹೇಳುತ್ತಿರುತ್ತಾರೆ. ಆದರೆ, ಹಾಗೆ ಬಂದ ಲಿಂಕ್ ಕ್ಲಿಕ್ ಮಾಡಿದ್ದೇ ಆದಲ್ಲಿ ನೀವು ಸೈಬರ್ ದಾಳಿಗೆ ಗುರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿಶ್ವಾದ್ಯಂತ ಇರುವ ವಾಟ್ಸಾಪ್ ಬಳಕೆದಾರರಿಗೆ ಈ ಕುರಿತು ತಜ್ಞರು ಎಚ್ಚರಿಸುತ್ತಿದ್ದಾರೆ. ಜನರನ್ನು ವಂಚಿಸಿ ಸುಲಭವಾಗಿ ಅವರ ಮಾಹಿತಿ ಕದಿಯಲು ಇಂತಹ ತಂತ್ರ ಬಳಸುತ್ತಿದ್ದಾರೆ ಎಂದು ದ ಸನ್ ಪತ್ರಿಕೆ ಲೇಖನ ಪ್ರಕಟಿಸಿದೆ.

ವಾಟ್ಸಾಪ್ ಬಳಕೆದಾರು ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ವೀಡಿಯೋ ಕಾಲಿಂಗ್ ಸೌಲಭ್ಯ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸೌಲಭ್ಯ ಪಡೆಯಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ತಮ್ಮ ವಾಟ್ಸಾಪ್ ಅಪ್ಡೇಟ್ ಮಾಡಿದರೆ ಸಾಕು. ಆದರೆ ಈಗಲೂ ವೀಡಿಯೋ ಕಾಲಿಂಗ್ ಗೆ ಸಂಬಂಧಿಸಿದಂತೆ ಫಾರ್ವಾರ್ಡ್ ಮೆಸೇಜ್ ಗಳು ಬರುತ್ತಿರುತ್ತವೆ. ಅಂತಹ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ನಿಮ್ ಮೊಬೈಲ್ ಅವರ ನಿಯಂತ್ರಣಕ್ಕೆ ಹೋಗುತ್ತದೆ. ನಿಮ್ಮ ಮೊಬೈಲಿನಲ್ಲಿ ಸ್ಟೋರ್ ಮಾಡಿರುವ ಎಲ್ಲಾ ಮಾಹಿತಿ ಹ್ಯಾಕರ್ ಪಾಲಾಗುತ್ತದೆ.

ಇನ್ನು ಕೆಲವರು ಯಾವುದೋ ಆಫರ್ ಇದೆ, ಈ ಲಿಂಕ್ ಕ್ಲಿಕ್ ಮಾಡಿದರೇನೇ ನಿಮಗೆ ಈ ಆಫರ್ ಸಿಗುತ್ತದೆ ಎಂದು ಮೆಸೇಜ್ ಅಥವಾ ಇಮೇಲ್ ಕಳುಹಿಸುತ್ತಾರೆ. ಆದರೆ ಆ ಲಿಂಕ್ ತೆರೆದ ಕೂಡಲೇ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಹ್ಯಾಕ್ ಆಗುತ್ತದೆ. ಹೀಗಾಗಿ ಫಾರ್ವಾರ್ಡ್ ಮೆಸೇಜ್, ಆಫರ್ ಲಿಂಕ್ ಗಳನ್ನು ಕ್ಲಿಕ್ಕಿಸುವ ಮುನ್ನ ಯೋಚಿಸಿ.