ಇಂದು ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ

ಬೆಂಗಳೂರು: ಇಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಜ್ಕಕೂರು ವಾಯುನೆಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ. ಹೊಯ್ಸಳ ಪ್ರಾಜೆಕ್ಟ್ ಪ್ರೈ. ಲಿಮಿಟೆಡ್ ಸಂಸ್ಥೆಯು ಈ ಮೋಡ ಬಿತ್ತನೆ ಕಾರ್ಯದ ಗುತ್ತಿಗೆ ಪಡೆದುಕೊಂಡಿದೆ.

ಈಗಾಗಲೇ ಬೆಂಗಳೂರು, ಯಾದಗಿರಿ ಜಿಲ್ಲೆಯ ಸುರಪುರ, ಗದಗಗಳಲ್ಲಿ ಮೂರು ರಾಡಾರ್ ಗಳನ್ನು ನಿರ್ಮಿಸಲಾಗಿದೆ. ಈ ರಾಡಾರ್ ಗಳು 360 ಡಿಗ್ರಿ ರೇಡಿಯಸ್ ನಲ್ಲಿ ಸುಮಾರು 200 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಮಳೆ ತರಿಸಬಲ್ಲ ಮೋಡಗಳನ್ನು ಗುರುತಿಸಲು ಸಹಕಾರಿಯಾಗುತ್ತವೆ.

ಈ ರಾಡಾರ್ ಗಳಿಂದ ಮಾಹಿತಿ ಪಡೆಯುವ ಪೈಲಟ್ ಗಳು, ವಿಮಾನಗಳ ಮೂಲಕ ಮೋಡ ಬಿತ್ತನೆ ಕಾರ್ಯ ನಡೆಸುತ್ತಾರೆ. ವಿಮಾನಗಳಿಂದ ಮೋಡಗಳ ಮೇಲೆ ಸಿಲ್ವರ್ ಅಯೋಡೈಡ್ ಸಿಂಪಡಿಸಲಾಗುತ್ತದೆ. ಮೋಡಗಳಲ್ಲಿನ ತೇವಾಂಶವನ್ನು ಮಳೆಯಾಗಿ ಪರಿವರ್ತಿಸುವ ಪ್ರಯತ್ನ ಇದಾಗಿದೆ. ಈ ಹಿಂದೆ ಎಸ್.ಎಂ.ಕೃಷ್ಣ ರವರ ಸರ್ಕಾರದಲ್ಲಿಯೂ ಇಂತಹ ಪ್ರಯತ್ನ ನಡೆದಿತ್ತು. ಆದರೆ ಅದು ಯಶಸ್ವಿಯಾಗಿರಲಿಲ್ಲ.