ಮಮತಾ ‘ಹತ್ಯೆಗೆ ಸಂಚು’ ವಿಷಯದಲ್ಲಿ ಹೊಸ ಟ್ವಿಸ್ಟ್ – News Mirchi

ಮಮತಾ ‘ಹತ್ಯೆಗೆ ಸಂಚು’ ವಿಷಯದಲ್ಲಿ ಹೊಸ ಟ್ವಿಸ್ಟ್

ಕೊಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ವಿಮಾನ ಇತ್ತೀಚೆಗೆ ಕೊಲ್ಕತಾದಲ್ಲಿ ತಡವಾಗಿ ಲ್ಯಾಂಡ್ ಆಗಿದ್ದ ವಿಷಯ ಗದ್ದಲಕ್ಕೆ ಕಾರಣವಾಗಿತ್ತು. ವಿಮಾನದಲ್ಲಿ ಇಂಧನ ಮುಗಿದು ಹೋಗುತ್ತಿದ್ದರೂ, ಲ್ಯಾಂಡಿಂಗ್ ಮಾಡಲು ಅನುಮತಿ ನೀಡಲಿಲ್ಲ, ಇದು ಮಮತಾ ಬ್ಯಾನರ್ಜಿಯನ್ನು ಹತ್ಯೆ ಮಾಡಲು ನಡೆಸಿದ ಸಂಚು ಎಂದು ತೃಣಮೂಲ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆಯವರೂ ಇದು ಮಮತಾರನ್ನು ಹತ್ಯೆ ಮಾಡುವ ಸಂಚು ಎಂದು ಆರೋಪಿಸಿದ್ದರು.

ಆದರೆ ಮಮತಾ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ತಡವಾಗಲು ಅಸಲಿ ರಹಸ್ಯವನ್ನು ಡಿಜಿಸಿಎ ಬಹಿರಂಗಪಡಿಸಿದೆ. ಪೈಲಟ್ ಗಳು ಬೇಕೆಂದೇ ವಿಮಾನವನ್ನು ಬೇಗ ಲ್ಯಾಂಡಿಂಗ್ ಮಾಡಿಸಲು ಯತ್ನಿಸಿದರು, ಸಕಾಲದಲ್ಲಿ ವಿಮಾನವನ್ನು ಇಳಿಸಿ ಮಮತಾ ಬ್ಯಾನರ್ಜಿ ಬಳಿ ಒಳ್ಳೆಯ ಹೆಸರು ಪಡೆಯಬೇಕೆಂಬ ಪ್ರಯತ್ನದಲ್ಲಿ ಪೈಲಟ್ ಗಳು ಅಂದು ಗೊಂದಲಕಾರಿಯಾಗಿ ವರ್ತಿಸಿದ್ದಾರೆ. ಹೀಗೆ ಮಾಡಿದ ಕಾರಣ ಅವರನ್ನು ಕೆಲಸದಿಂದ ಒಂದು ವಾರ ಕೈಬಿಡಬೇಕು ಎಂದು ನಾಗರಿಕ ವಿಮಾನಯಾನ ಡೈರೆಕ್ಟರ್ ಜನರಲ್(ಡಿಜಿಸಿಎ) ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಮಮತಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಾಕಷ್ಟು ಇಂಧನವಿತ್ತು, ಆದರೂ ಬೇಗ ಲ್ಯಾಂಡಿಂಗ್ ಮಾಡಿ ಮುಖ್ಯಮಂತ್ರಿ ಬಳಿ ವೈಯುಕ್ತಿಕವಾಗಿ ಉತ್ತಮ ಹೆಸರು ಗಳಿಸಲು ಪೈಲಟ್ ಗಳು ಇಂಧನ ಖಾಲಿ ಎಂಬ ನಾಟಕವಾಡಿದ್ದಾರೆ ಎಂದು ಡಿಜಿಸಿಎ ಹೇಳಿದೆ. ಹೀಗೆ ಒಂದೇ ಬಾರಿಗೆ ಸುಳ್ಳು ಹೇಳಿ ಲ್ಯಾಂಡಿಂಗ್ ಗಾಗಿ ಒತ್ತಾಯಿಸಿದ ಮೂರು ವಿಮಾನಗಳು ಸೇರಿವೆ. ಇಂಡಿಗೋ, ಏರ್ ಇಂಡಿಯಾ, ಸ್ಪೈಸ್ ಜೆಟ್ ವಿಮಾನಗಳು ಒಂದೇ ಸಮಯದಲ್ಲಿ ಕೆಳಗಿಳಿಯಲು ಪ್ರಯತ್ನಿಸಿದವು. ಅದರಲ್ಲಿ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ವಿಮಾನವೂ ಒಂದು.

ಮೊದಲು ಇಂಡಿಗೋ ವಿಮಾನ ಪೈಲಟ್ ಇಂಧನ ಖಾಲಿಯಾಗುತ್ತಿದೆ, ಲ್ಯಾಂಡಿಂಗ್ ಗೆ ಅನುಮತಿ ನೀಡಿ ಎಂದು ಮನವಿ ಮಾಡಿದ. ಹೀಗಾಗಿ ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ಮೊದಲು ಲ್ಯಾಂಡ್ ಆಗಲು ಸಿದ್ಧವಾಗಿದ್ದ ಏರ್ ಇಂಡಿಯಾ ಪೈಲಟ್ ನನ್ನು ಸಂಪರ್ಕಿಸಿದಾಗ, ಆತ ಕೂಡಾ ಇಂಧನ ಖಾಲಿಯಾಗುತ್ತಿದೆ ಲ್ಯಾಂಡಿಂಗ್ ಗೆ ಅನುಮತಿ ನೀಡಿ ಎಂದು ಮನವಿ ಮಾಡಿದ. ಮತ್ತೊಂದು ಕಡೆ ಸ್ಪೈಸ್ ಜೆಟ್ ವಿಮಾನದಿಂದಲೂ ಇದೇ ಮನವಿ ಬಂತು.

ಮೂರು ವಿಮಾನಗಳು ಒಂದೇ ಬಾರಿ ಲ್ಯಾಂಡ್ ಆಗಲು ಅಸಾಧ್ಯ, ಹಾಗಾಗಿ ಲ್ಯಾಂಡಿಂಗ್ ಪ್ರಿಯಾರಿಟಿ ಪ್ರಕಾರ ಒಂದರ ನಂತರ ಮತ್ತೊಂದು ವಿಮಾನಕ್ಕೆ ಅನುಮತಿ ನೀಡಿದರು. ಈ ಮೂರು ವಿಮಾನಗಳಲ್ಲಿ ಸಾಕಷ್ಟು ಇಂಧನ ಇದ್ದರೂ ಸುಳ್ಳು ಮಾಹಿತಿ ನೀಡಿದ ಮೂರೂ ವಿಮಾನಗಳ ಪೈಲಟ್ ಗಳನ್ನು ಕೆಲಸದಿಂದ ಒಂದು ವಾರ ವಜಾಗೊಳಿಸುವಂತೆ ಡಿಜಿಸಿಎ ಅದೇಶಿಸಿದೆ. ಹಾಗೆಯೇ ಪೈಲಟ್ ಗಳಿಗೆ ಸೂಕ್ತ ತರಬೇತಿ ನೀಡುವಂತೆಯೂ ಸೂಚಿಸಿದೆ.

Loading...

Leave a Reply

Your email address will not be published.