ಪ್ರೀತಿಯ ಪ್ರಧಾನಿಗೆ ತೆರಿಗೆದಾರನ ಪತ್ರ

ನನ್ನ ಹೆಸರು ಪ್ರಸಾದ್, ಹೈದರಾಬಾದ್ ನಲ್ಲಿ ಬಾಲಾನಗರದಲ್ಲಿ ಸಣ್ಣ ಉದ್ಯಮ ನಡೆಸುತ್ತಿದ್ದೇನೆ. ತಿಂಗಳಿಗೆ 2 ಲಕ್ಷ ಆದಾಯ ಬರುತ್ತದೆ, ಅಂದರೆ ವರ್ಷಕ್ಕೆ 24 ಲಕ್ಷ. ಪ್ರಾಮಾಣಿಕವಾಗಿ ಆದರೆ ಪ್ರತಿ ವರ್ಷ ಕನಿಷ್ಠ 3 ಲಕ್ಷ(ವಿನಾಯ್ತಿ ಹೊರತುಪಡಿಸಿ) ಕಟ್ಟಬೇಕಿರುತ್ತದೆ. ಆದರೆ ನಾನು ಕೇವಲ 30ಸಾವಿರ ಕಟ್ಟುತ್ತೇನೆ, ಏಕೆಂದರೆ…

ನಾನು ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ್ದೇನೆ. ನಾನು ಕಷ್ಟ ಪಟ್ಟು ಓದಿ, ಕೆಲ ಕಾಲ ಉದ್ಯೋಗ ಮಾಡಿ, ಪ್ರತಿ ಪೈಸೆ ಕೂಡಿಟ್ಟು ಸ್ವಂತ ಉದ್ಯಮ ಆರಂಭಿಸುವ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಸಂಪಾದನೆಯ 2 ಲಕ್ಷಗಳಲ್ಲಿ ಒಂದು ಲಕ್ಷ ನನ್ನ ಕುಟುಂಬದ ಅವಶ್ಯಕತೆಗಳಿಗೆ ಸರಿ ಹೋಗುತ್ತದೆ. ಮತ್ತೊಂದು ಲಕ್ಷ ಚಿನ್ನ, ಭೂಮಿಯ ಮೇಲೆ ಬಂಡವಾಳ ಹಾಕುತ್ತೇನೆ. ನಾನು ಖರ್ಚು ಮಾಡುವ ಒಂದು ಲಕ್ಷದಲ್ಲಿ ಸರ್ಕಾರ ಶೇ.30 ರಷ್ಟು ಪರೋಕ್ಷ ರೂಪದಲ್ಲಿ ಪಡೆಯುತ್ತದೆ. ದಿನಸಿಯಿಂದ ಹಿಡಿದು ಟಿವಿ, ಮೊಬೈಲ್ ಏನೇ ಖರೀದಿಸಿದರೂ ಶೇ. 20 ರಿಂದ 30 ರವರೆಗೆ . ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಮಾಡಿಕೊಂಡು 3000 ಖರ್ಚು ಮಾಡಿದರೆ ಅದಕ್ಕೆ ಶೇ. 60 ರಷ್ಟು . ಕಾರಿಗೆ ಪೆಟ್ರೋಲ್ ಹಾಕಿಸಿದರೆ ಶೇ.30 . ಕಾರು ಖರೀದಿಸಿದರೆ ಎಲ್ಲಾ ಸೇರಿಸಿ ಒಂದೂವರೆ ಲಕ್ಷ ಕಟ್ಟಿದ್ದೇನೆ‌.

ಮನೆಗಾಗಿ ಜಾಗ ಖರೀದಿಸಿದಾಗ ಒಂದು ಲಕ್ಷ ರಿಜಿಸ್ಟ್ರೇಷನ್ ಗಾಗಿ ಕಟ್ಟಿದ್ದೇನೆ. ಮಣ್ಣನ ರಸ್ತೆಯಿರುವ ಕಾಲನಿಯಲ್ಲಿ ಜಾಗ ಖರೀದಿಸಿದರೆ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಸರ್ಕಾರ 50 ಸಾವಿರ ವಸೂಲಿ ಮಾಡಿದೆ. ಸರ್ಕಾರಿ ಆಸ್ಪತ್ರೆ ಎಷ್ಟು ಅದ್ವಾನವಾಗಿದೆಯೋ ಎಂದು ನೋಡಿದ ಮೇಲೆ ಕಾರ್ಪೊರೇಟ್ ಆಸ್ಪತ್ರೆಗಳು ಎಷ್ಟು ದರೋಡೆ ಮಾಡುತ್ತಿವೆ ಎಂದು ನೋಡಿದ ಮೇಲೆ ವಿಧಿ ಇಲ್ಲದೆ ಆರೋಗ್ಯ ವಿಮೆ ಮಾಡಿಸಿದರೆ ನಾಚಿಕೆ ಇಲ್ಲದೆ ಸರ್ಕಾರ ಅದರ ಮೇಲೂ ಸರ್ವೀಸ್ ಟ್ಯಾಕ್ಸ್ ವಿಧಿಸಿತು. ರಸ್ತೆಯಲ್ಲಿ ಕಳ್ಳರು ದೋಚಿಕೊಂಡಂತೆ, ಕೊನೆಗೆ ಸ್ಮಶಾನದಲ್ಲಿ ಶವ ಸುಡಲೂ ತೆರಿಗೆ ಹಾಕುವ ಸರ್ಕಾರ ನಮಗೆ ವಾಪಸ್ ಏನು ನೀಡುತ್ತಿದೆ?

ಸರ್ಕಾರಿ ಶಾಲೆಗಳಲ್ಲಿ ಸೇರಿಸಿದರೆ ನಮ್ಮ ಮಕ್ಕಳಿಗೆ ಓದು ಬರುತ್ತದೆ ಎಂಬ ನಂಬಿಕೆ ಇದೆಯಾ? ಸರ್ಕಾರಿ ಆಸ್ಪತ್ರೆಗೆ ಹೋದರೆ ಕ್ಷೇಮವಾಗಿ ಹಿಂದಿರುಗುತ್ತೇವೆ ಎಂಬ ಗ್ಯಾರೆಂಟಿ ಇದೆಯಾ? ದೇಶದ ರಕ್ಷಣೆ, ರಸ್ತೆ ಹಾಕುವುದು ಹೊರತುಪಡಿಸಿದರೆ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳೇನೋ ನಮಗೆ ತಿಳಿಯುತ್ತಿಲ್ಲ.

pay-income-tax-online-02ಕಾರು ಕೊಂಡರೆ ರೋಡ್ ಟ್ಯಾಕ್ಸ್, ರಸ್ತೆಗಿಳಿದರೆ ಟೋಲ್ ಟ್ಯಾಕ್ಸ್ ಎಂದು ಚರ್ಮ ಸುಲಿಯುತ್ತಿದ್ದಾರೆ ಅಲ್ವಾ ಸರ್. ಇನ್ನು ನಮ್ಮ ತೆರಿಗೆ ಹಣ ಏನಾಗುತ್ತಿದೆ? ನಮ್ಮ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ವೇತನ ಹೆಚ್ಚಳ ಮಾಡಬೇಕೆಂದರೆ ಅವರು ಎಷ್ಟು ಕೆಲಸ ಮಾಡುತ್ತಾರೆ, ಹೇಗೆ ಕೆಲಸ ಮಾಡುತ್ತಾರೆ ಎಂದು ನೋಡಿ ವೇತನ ಹೆಚ್ಚಳ ಮಾಡುತ್ತೇವೆ. ಆದರೆ ಸರ್ಕಾರಗಳು ಏನು ಮಾಡುತ್ತಿವೆ. ಉದ್ಯೋಗಿ ಕೆಕಸ ಮಾಡಲಿ ಬಿಡಲಿ, ಎಷ್ಟೇ ಕಳಪೆಯಾಗಿ ಕೆಲಸ ಮಾಡಲಿ ಒಂದೇ ವೇತನ, ಒಂದೇ ಇನ್ಕ್ರಿ‌ಮೆಂಟ್.

10 ಗಂಟೆ ಎಂದರೆ 11 ಗಂಟೆಗೆ ಕಛೇರಿಗೆ ಬರುತ್ತಾರೆ. ಲಂಚವಿಲ್ಲದೆ ಕೆಲಸ ಮಾಡುವುದಿಲ್ಲ, ಮತ್ತೇಕೆ ಸರ್ ನಾವು ತೆರಿಗೆ ಕಟ್ಟಬೇಕು? ನಮ್ಮ ಉದ್ದಿಮೆ ನಡೆಯಬೇಕೆಂದರೆ ವಿದ್ಯುತ್ ನಿಂದ ಹಿಡಿದು ಪ್ರತಿಯೊಬ್ಬರಿಗು ನೀಡಬೇಕು. ಎಲ್ಲರಿಗೂ ಸೇರಿ ನಾನು ತಿಂಗಳಿಗೆ ಹತ್ತು ಸಾವಿರ ನೀಡಬೇಕಾಗುತ್ತದೆ. ಆ ಲಂಚವನ್ನೆಲ್ಲಾ ನಾನು ವೈಟ್ ಮನಿಯಂತೆ ತೋರಿಸುವುದು ಹೇಗೆ ಸರ್? ಅದಕ್ಕೆ ಸರ್ ನಮಗೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕೆಂದರೆ ಹೊಟ್ಟೆ ಉರಿಯುತ್ತೆ. ಹಾಗಂತ ನಾನು ಸಾಮಾಜಿಕ ಜವಾಬ್ದಾರಿ ಇಲ್ಲದವನಲ್ಲ ಸರ್. ನೀವು ಸೈನಿಕರ ನಿಧಿಗೆ ದೇಣಿಗೆ ನೀಡುವಂತೆ ಕರೆ ಕೊಟ್ಟಾಗ ಹತ್ತು ಸಾವಿರ ನೀಡಿದ್ದೇನೆ. ನಮಗೆ ಸಮೀಪವಿರುವ ಅನಾಥಾಶ್ರಮಕ್ಕೆ ಪ್ರತಿ ವರ್ಷ 20 ಸಾವಿರ ನೀಡುತ್ತೇನೆ. ನಮ್ಮೂರಿನ ಶಾಲೆ ಅಭಿವೃದ್ಧಿಗಾಗಿ ಒಂದು ಲಕ್ಷ ಡೊನೇಷನ್ ಕೊಟ್ಟೆ. ಆದರೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕೆಂದರೆ ನಮಗೆ ಮನಸ್ಸು ಬರುವುದಿಲ್ಲ ಸರ್.

commanss-415x250ಓಕೆ ಇದೆಲ್ಲಾ ಮುಗಿದ ಕಥೆ. ಈಗ ಎಲ್ಲಾ ವ್ಯವಹಾರ ವೈಟ್ ಮನಿಯಲ್ಲಿಯೇ ನಡೆಸೋಣ. ನೀವು ನಿರ್ಧರಿಸಿದಂತೆ ನನ್ನ ಬಳಿ ಇರುವ 10 ಲಕ್ಷಕ್ಕೆ ಶೇ.30 ಅಂದರೆ 3 ಲಕ್ಷ ಕಟ್ಟಿ ವೈಟ್ ಮನಿ ಆಗಿ ಬದಲಾಯಿಸಿಕೊಳ್ಳುತ್ತೇನೆ. ಆದರೆ ನಾಳೆಯಿಂದ ತಿಂಗಳಿಗೆ 10 ಸಾವಿರ ನೀಡದೆ ಕೆಲಸ ನಡೆಯುತ್ತದೆ ಎಂದು ಗ್ಯಾರೆಂಟಿ ನೀಡುತ್ತೀರಾ? ಇಲ್ಲ ಅಂದ್ರೆ ಲಂಚವನ್ನು ಚೆಕ್ ರೂಪದಲ್ಲಿ ತೆಗೆದುಕೊಳ್ಳುವಂತೆ ಅನುಮತಿ ನೀಡುತ್ತೀರಾ?

ಇನ್ನು ನಮ್ಮ ನಾಯಕರ ಬಗ್ಗೆ ಹೇಳಲಿಲ್ಲ ಅಲ್ಲವೇ? ನಮ್ಮ ಗಲ್ಲಿ ಲೀಡರ್ ನಿಂದ ಹಿಡಿದು ಶಾಸಕರವರೆಗೂ ಎಲ್ಲಾ ಪಕ್ಷದವರಿಗೆ ಎಲೆಕ್ಷನ್ ಗೆ ದೇಣಿಗೆ ನೀಡಬೇಕು. ಇಲ್ಲವೆಂದರೆ ತೊಂದರೆ ಕೊಡುತ್ತಾರೆ. ಇವರನ್ನು ದೇಣಿಗೆ ಚೆಕ್ ರೂಪದಲ್ಲಿ ಪಡೆಯುವಂತೆ ಕಾನೂನು ತರುತ್ತೀರಾ? ಪಕ್ಷಗಳ ಹಣಕಾಸು ವಿವರವನ್ನು ಬಹಿರಂಗವಾಗಿಡುವಂತೆ ಮಾಡುತ್ತೀರಾ? ಈಗಾಗಲೇ ಹಲವು ತೆರಿಗೆ ಕಟ್ಟುತ್ತಿರುವ ನಾವು, ನಾಯಕರ ಮೋಜಿಗಾಗಿ, ಉದ್ಯೋಗಿಗಳ ವೇತನಗಳಿಗಾಗಿ ತೆರಿಗೆ ಕಟ್ಟುವುದಿಲ್ಲ ಸರ್. ಸಾಧ್ಯವಾದಷ್ಟು ಯಾಮಾರಿಸುತ್ತೇವೆ.

checkingspreadsheetಹತ್ತು ವರ್ಷದಲ್ಲಿ ದೇಶದಲ್ಲಿ ಮತ್ತೆ ಬ್ಲಾಕ್ ಮನಿ ಹೆಚ್ಚಾಗುತ್ತದೆ. ಆಗ ಮತ್ತೆ ನೋಟು ಬದಲಾವಣೆ ಮಾಡುತ್ತೀರಾ? ಇದಕ್ಕಲ್ಲ ಸರ್ ನಾವು ನಿಮ್ಮನ್ನು ಆಯ್ಕೆ ಮಾಡಿದ್ದು. ನಿಮ್ಮ ನಿರ್ಧಾರದಿಂದ ಎರಡು ದಿನಗಳಿಂದ ಕೈಯಲ್ಲಿ ಹಣವಿಲ್ಲದೆ ತೊಂದರೆ ಅನುಭವಿಸುತ್ತಿರುವ ನಮ್ಮ ಕಾರ್ಮಿಕರೂ ಕೂಡಾ, ನಿಮ್ಮ ಮೇಲಿನ ನಂಬಿಕೆಯಿಂದ ಅವರ ಕಷ್ಟವನ್ನು ಸಂತೋಷವಾಗಿ ಭರಿಸುತ್ತಿದ್ದಾರೆ ಸರ್. ಆ ನಂಬಿಕೆಯನ್ನು ಉಳಿಸಿಕೊಳ್ಳಿ, ನಮ್ಮ ತೆರಿಗೆ ಹಣಕ್ಕೆ ನ್ಯಾಯ ಒದಗಿಸಿ. ಆಗ ನಾವು ಕೂಡಾ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತೇವೆ. ಎರಡೂ ಕೈ ಸೇರಿದರೇನೇ ಸರ್ ಚಪ್ಪಾಳೆ, ನಮ್ಮ ಕೈ ಸಿದ್ದ, ನಿಮ್ಮ ಕೈಗಾಗಿ ನಿರೀಕ್ಷಿಸುತ್ತಿದ್ದೇವೆ.

ಇಂತಿ ನಿಮ್ಮ ಅಭಿಮಾನಿ ಮತದಾರ.

Related News

loading...
error: Content is protected !!