ವಿಪ್ ಉಲ್ಲಂಘಿಸಿದ ಕಾಂಗ್ರೆಸ್ ಶಾಸಕರ ಉಚ್ಛಾಟನೆ

ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದೆ. 8 ಶಾಸಕರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಚುನಾವಣೆಗೂ ಮುನ್ನ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಇನ್ನೂ 6 ಶಾಸಕರನ್ನು ಉಚ್ಛಾಟಿಸಲು ಶಿಫಾರಸು ಮಾಡಲಾಗಿದೆ ಎಂದು ಗುಜರಾತ್ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.  ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಂಕರ್ ಸಿಂಗ್ ವಾಘೇಲಾ, ಮಹೇಂದ್ರ ವಾಘೇಲಾ, ರಾಘವ್ ಜೀ ಪಟೇಲ್, ಅಮಿತ್ ಚೌದರಿ, ಬೋಲಾಬಾಯ್ ಗೋಹಿಲ್, ಸಿ.ಕೆ.ರೌಲ್ಜೀ, ಕರಣ್ ಪಟೇಲ್, ಧರ್ಮೇಂದ್ರ ಜಡೇಜಾ ಉಚ್ಛಾಟನೆಗೊಂಡವರು.

ಮಂಗಳವಾರ ಗುಜರಾತ್ ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರೆಲ್ಲಾ ಪಕ್ಷದ ಅಭ್ಯರ್ಥಿ ಅಹಮದ್ ಪಟೇಲ್ ಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡಲಾಗಿತ್ತು. ಆದರೆ ಒಟ್ಟು 14 ಶಾಸಕರು ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಹೀಗಾಗಿ ಇವರನ್ನು ಉಚ್ಛಾಟನೆಗೊಳಿಸುತ್ತಿರುವುದಾಗಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.