2019 ರಲ್ಲಿ ಅಧಿಕಾರಕ್ಕೆ ಬಂದರೆ ಒಂದೇ ಹಂತದ ತೆರಿಗೆ ವ್ಯವಸ್ಥೆ ಜಾರಿ : ರಾಹುಲ್

ಗಾಂಧಿನಗರ: 2019 ರಲ್ಲಿ ನಾವು ಅಧಿಕಾರಕ್ಕೆ ಬಂದರೆ ಜಿಎಸ್ಟಿ ಯನ್ನು ಶೇ.18 ರಷ್ಟು ಇರುವಂತೆ ಒಂದೇ ಹಂತದ ತೆರಿಗೆ ದರ ವ್ಯಾಪ್ತಿಗೆ ತರುತ್ತೇವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತಕ್ಕೆ 5 ಹಂತದ ತೆರಿಗೆ ದರ ವ್ಯವಸ್ಥೆಯ ಅವಶ್ಯಕತೆಯಿಲ್ಲ, ಈ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯವಿದೆ ಎಂದು ಹೇಳಿದರು.

ಶನಿವಾರ ಗುಜರಾತ್ ರಾಜಧಾನಿ ಗಾಂಧಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಿದ್ದ ರಾಹುಲ್, ಕೇಂದ್ರ ಸರ್ಕಾರ ಶುಕ್ರವಾರ ಸುಮಾರು 200 ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಕಡಿತಗೊಳಿಸಿದರೂ ಅದು ಸಾಕಾಗುವುದಿಲ್ಲ. ಕೇಂದ್ರ ಸರ್ಕಾರದ ಕ್ರಮ ತೃಪ್ತಿ ತಂದಿಲ್ಲ, ಗಬ್ಬರ್ ಸಿಂಗ್ ಟ್ಯಾಕ್ಸ್ ಅನ್ನು ರದ್ದುಗೊಳಿಸಿ, ಒಂದೇ ಹಂತದ ತೆರಿಗೆ ವ್ಯವಸ್ಥೆಯನ್ನು ಜಾರಿ ಮಾಡಬೇಕು. ಆ ಒಂದೇ ಹಂತದ ತೆರಿಗೆ ದರ ವ್ಯವಸ್ಥೆಗೆ ಶೇ.18 ರಷ್ಟು ತೆರಿಗೆಯನ್ನು ಮಾತ್ರ ವಿಧಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಬಿಜೆಪಿ ಹಾಗೆ ಮಾಡದಿದ್ದಲ್ಲಿ, 2019 ರಲ್ಲಿ ನಾವೇ ಆ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಜನಸಾಮಾನ್ಯರ ಒತ್ತಡದಿಂದಾಗಿಯೇ ಕೇಂದ್ರ ಸರ್ಕಾರ ಹಲವು ವಸ್ತುಗಳನ್ನು 28 ರಿಂದ ಶೇ.18 ರ ತೆರಿಗೆ ವ್ಯಾಪ್ತಿಗೆ ಬದಲಾಯಿಸಿದೆ ಎಂದು ಹೇಳಿದರು.

ಅದಕ್ಕೂ ಮುನ್ನಾ, ಪ್ರಸಿದ್ಧ ಅಕ್ಷರಧಾಮ ದೇಗುಲದಲ್ಲಿ ಪೂಜೆ ನಡೆಸಿ ಗುಜರಾತ್ ನಲ್ಲಿ ಚುನಾವಣಾ ಪ್ರಚಾರವನ್ನು ರಾಹುಲ್ ಗಾಂಧಿ ಪ್ರಾರಂಭಿಸಿದರು. ಬೆಳಗ್ಗೆ ಗಾಂಧಿನಗರ ತಲುಪಿದ ರಾಹುಲ್, ಅಕ್ಷರಧಾಮ ದೇಗುಲಕ್ಕೆ ತೆರಳಿ ಸ್ವಾಮಿ ನಾರಾಯಣ್ ಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮೂರು ದಿನಗಳ ಕಾಲ ಆರು ಜಿಲ್ಲೆಗಳಲ್ಲಿ ಸಾಗುವ ಪ್ರವಾಸವನ್ನು ಆರಂಭಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಹಿಂದೂ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಇಂತಹ ಗಿಮಿಕ್ ಗಳ ಮೂಲಕ ಮತ ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಇಂತಹ ಗಿಮಿಕ್ ಗಳನ್ನು ಬಿಟ್ಟು ಹಿಂದುತ್ವವನ್ನು ಗೌರವಿಸಲಿ ಎಂದು ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದರು. ತಮ್ಮ ನಾಯಕ ಒಂದು ದೇಗುಲಕ್ಕೆ ಭೇಟಿ ನೀಡುವುದನ್ನು ವಿರೋಧಿಸುತ್ತಿರುವ ಬಿಜೆಪಿಗೆ ಗುಜರಾತ್ ಚುನಾವಣೆಯಲ್ಲಿ ಜನ ತಕ್ಕ ಪಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ತಿರುಗೇಟು ನಿಡಿದೆ.

Get Latest updates on WhatsApp. Send ‘Add Me’ to 8550851559