ಕಾಂಗ್ರೆಸ್ ನಾಯಕರ ಬಳಿ 12 ಲಕ್ಷ ಕೋಟಿ ಕಪ್ಪು ಹಣ

ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ಸುಮಾರು 12 ಲಕ್ಷ ಕೋಟಿ ರೂಪಾಯಿ ಕಪ್ಪು ಹಣ ಕೂಡಿಟ್ಟಿದ್ದಾರೆ, ಇದು ಕೇಂದ್ರ ಸರ್ಕಾರದ ಮೂರು ಬಡ್ಜೆಟ್ ಗಳಿಗೆ ಸಮ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿಯವರ ತೀರ್ಮಾನದಿಂದ ಆ ಹಣವೆಲ್ಲಾ ಬರೀ ಕಾಗದಗಳಾಗಿ ಬದಲಾಗಿದೆ ಎಂದು ಅವರು ಹೇಳಿದರು. ಆದ್ದರಿಂದಲೇ ಕಾಂಗ್ರೆಸ್ ನವರಿಗೆ ಹಳೆಯ ನೋಟು ರದ್ದು ತೀರ್ಮಾನದ ಕುರಿತು ಕೋಪವಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನೂ ಟೀಕಿಸಿದ ಅಮಿತ್ ಶಾ, ರೂ. 4 ಸಾವಿರ ಬದಲಾಯಿಸಿಕೊಳ್ಳಲು 4 ಕೋಟಿ ರೂಪಾಯಿಯ ಕಾರಿನಲ್ಲಿ ರಾಹುಲ್ ಬ್ಯಾಂಕ್ ಗೆ ಬಂದಿದ್ದರು ಎಂದರು. ಗುಜರಾತಿನ ಬರೂಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಯುಪಿಎ ಅವಧಿಯಲ್ಲಿ ಪ್ರತಿ ತಿಂಗಳು ಒಂದೊಂದು ಹಗರಣ ಬಯಲಾಯಿತು ಎಂದು ಟೀಕಿಸಿದರು.