ಕರುನಾಡ ಸೇನೆಯ ಅಗ್ನಿ ಶ್ರೀಧರನ ಮನೆಯಲ್ಲಿ ಸುಪಾರಿ ಕಿಲ್ಲರ್ಸ್, ಪೊಲೀಸರ ದಾಳಿ

***

ಇತ್ತೀಚೆಗಷ್ಟೇ ಯಲಹಂಕದಲ್ಲಿ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲೆ ನಡೆದ ಶೂಟೌಟ್ ಪ್ರಕರಣದಲ್ಲಿ ಅಗ್ನಿ ಪತ್ರಿಕೆಯ ಸಂಪಾದಕ ಮತ್ತು ಕರುನಾಡ ಸೇನೆ ಸಂಘಟನೆಯ ಸ್ಥಾಪಕ ಅಗ್ನಿ ಶ್ರೀಧರ ಕೈವಾಡದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಕಡಬಗೆರೆ ಶ್ರೀನಿವಾಸ್ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅಗ್ನಿ ಶ್ರೀಧರ್ ನಿವಾಸದ ಮೇಲೆ ಮಂಗಳವಾರ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಪರವಾನಗಿ ಇಲ್ಲದೆ ಇಟ್ಟುಕೊಂಡಿದ್ದ ಪಿಸ್ತೂಲು, ಮಾರಕಾಸ್ತ್ರಗಳು ಮತ್ತು ದುಬಾರಿ ಮದ್ಯ ಪತ್ತೆಯಾಗಿವೆ ಎನ್ನಲಾಗಿದೆ.

ಕಡಬಗೆರೆ ಶ್ರೀನಿವಾಸ್ ಹತ್ಯಾ ಯತ್ನ ಪ್ರಕರಣದ ಕುರಿತು ಅಗ್ನಿ ಶ್ರೀಧರ್ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಗ್ನಿ ಶ್ರೀಧರ್ ಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಗ್ನಿ ಶ್ರೀಧರ್ ನನ್ನು ನೋಡುವ ನೆಪದಲ್ಲಿ ಬಂದ ರೋಹಿತ್ ಅಲಿಯಾಸ್ ಒಂಟೆ ಪೊಲೀಸರಿಗೆ ಶರಣಾಗಿದ್ದಾನೆ. ನಂತರ ಸುನೀಲ ಕೂಡಾ ಪೊಲೀಸರ ಎದುರು ಶರಣಾಗಿದ್ದಾನೆ.

ಕಡಬಗೆರೆ ಶ್ರೀನಿವಾಸ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದ ರೋಹಿತ್ ಎಂಬ ರೌಡಿಗೆ ಅಗ್ನಿ ಶ್ರೀಧರ್ ನಿವಾಸದಲ್ಲಿ ಆಶ್ರಯ ನೀಡಿದ್ದು, ಪೊಲೀಸರು ವಾರೆಂಟ್ ಪಡೆದು ದಾಳಿ ನಡೆಸುವ ಮುನ್ನವೇ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಗ್ನಿ ಶ್ರೀಧರ್ ಆಪ್ತ ಮತ್ತು ರೌಡಿ ಶೀಟರ್ ಬಚ್ಚನ್ ನ ನಿವಾಸದ ಮೇಲೆಯೂ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಮಾರಕಾಸ್ತ್ರಗಳು, ಕಾನೂನು ಉಲ್ಲಂಘಿಸಿ ಬಾಡಿಗಾರ್ಡುಗಳನ್ನು ನೇಮಕ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಹತ್ಯೆಗೆ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಸುಪಾರಿ ಪಡೆದಿದ್ದರು ಎನ್ನಲಾಗಿದ್ದು, ಈ ಇಬ್ಬರೂ ರೌಡಿಗಳು ಶ್ರೀಧರ್ ಅವರ ಕರುನಾಡ ಸೇನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕನ್ನಡಪರ ಸಂಘಟನೆ ಮುಖವಾಡ ಹೊತ್ತು ಇವರು ಮಾಡುತ್ತಿರುವ ಕೆಲಸಗಳ ಬಗ್ಗೆ ಮೊದಲಿನಿಂದಲೂ ಟೀಕೆಗಳು ಕೇಳಿಬರುತ್ತಿವೆ.