ಸೇನೆಯ ಗುರಿ ಉಗ್ರರ ನಾಯಕರು, ಒಬ್ಬೊಬ್ಬರನ್ನೇ ಬಲಿ ಪಡೆಯುತ್ತಿರುವ ಯೋಧರು – News Mirchi

ಸೇನೆಯ ಗುರಿ ಉಗ್ರರ ನಾಯಕರು, ಒಬ್ಬೊಬ್ಬರನ್ನೇ ಬಲಿ ಪಡೆಯುತ್ತಿರುವ ಯೋಧರು

ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಕಳೆದ ವರ್ಷ ಜುಲೈ 8 ರಂದು ಎನ್ಕೌಂಟರ್ ನಲ್ಲಿ ಹತ್ಯೆಯಾಗಿದ್ದ. ಅಂದಿನಿಂದ ಕಾಶ್ಮೀರದಲ್ಲಿ ಕಾಶ್ಮೀರದಲ್ಲಿ ಅಶಾಂತಿ ನೆಲೆಸಿದೆ. ಇದಕ್ಕೆಲ್ಲಾ ಇತಿಶ್ರೀ ಹಾಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ “ಹಿಟ್ ಲಿಸ್ಟ್” ಅನ್ನು ತಯಾರಿಸಿ, ಅದರಂತೆ ಉಗ್ರರ ಹುಟ್ಟಡಗಿಸುತ್ತಿದೆ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಮೇ ತಿಂಗಳಾಂತ್ಯದಲ್ಲಿ ಮಾತನಾಡುತ್ತಾ, ಕಾಶ್ಮೀರದ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುತ್ತೇವೆ, ಪಾಕ್ ಪ್ರೇರಿತ ಉಗ್ರವಾದವನ್ನು ಕೊನೆಗಾಣಿಸುತ್ತೇವೆ ಎಂದು ಹೇಳಿದ್ದರು. ಪಕ್ಕಾ ತಂತ್ರವನ್ನು ಹೆಣೆದ ನಂತರವೇ ಅವರು ಈ ಪ್ರಕಟಣೆ ನೀಡಿದ್ದರು ಎಂದು ಕಾಣುತ್ತದೆ. ಭಾರತೀಯ ಸೈನಿಕರು, ಜಮ್ಮೂ ಕಾಶ್ಮೀರ ಪೊಲೀಸರು ಸೇರಿ ಉಗ್ರರ ಪಟ್ಟಿಯನ್ನು ಸಿದ್ಧಗೊಳಿಸಿದ್ದರು. 253 ಜನ ಸಕ್ರಿಯವಾಗಿ ಭಯೋತ್ಪಾದಕ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆಂಬ ತೀರ್ಮಾನಕ್ಕೆ ಬಂದರು. ಇವರಲ್ಲಿ ವಿದೇಶೀ ಉಗ್ರರೆಷ್ಟು ಜನ, ಸ್ಥಳೀಯರೆಷ್ಟು ಜನ ಪತ್ತೆ ಹಚ್ಚಿದರು. ಯಾರು ಯಾವ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೋ ಎಂಬುದನ್ನೂ ತಿಳಿದುಕೊಂಡು ಅವರ ಮೇಲೆ ನಿಗಾವಹಿಸಿದ್ದರು.

ಉಗ್ರರಿಗೆ ನಾಯಕತ್ವ ವಹಿಸುತ್ತಿದ್ದ 12 ಜನರ ಪಟ್ಟಿಯನ್ನು ಸಿದ್ಧಪಡಿಸಿ, ಜೂನ್ ಆರಂಭದಲ್ಲಿ ಬಿಡುಗಡೆ ಮಾಡಿದರು. ಇವರನ್ನು ಗುರಿಯಾಗಿಸಿಕೊಂಡು ಸದ್ಯ ಕಾರ್ಯಚರಣೆ ನಡೆಸುತ್ತಿದ್ದಾರೆ. ಎರಡು ತಿಂಗಳಲ್ಲಿ ಈ ಪಟ್ಟಿಯಲ್ಲಿರುವ ಮೂವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಜೂನ್ 16 ರಂದು ಅನಂತನಾಗ್ ಜಿಲ್ಲೆಯಲ್ಲಿನ ಅರ್ವಾನಿ ಗ್ರಾಮದಲ್ಲಿ ನಡೆದ ಎನ್ಕೌಂಟರಿನಲ್ಲಿ ಲಷ್ಕರ್-ಇ-ತೊಯ್ಬಾ(ಎಲ್ಇಟಿ) ಕಮಾಂಡರ್ ಜುನೇದ್ ಮಟ್ಟೂ ಹತನಾದ. ಮಟ್ಟು ಎನ್ಕೌಂಟರ್ ಗೆ ಪ್ರತೀಕಾರವಾಗಿ ಲಷ್ಕರ್ ಉಗ್ರರು ಅಂದೇ ಅನಂತ್ ನಾಗ್ ಜಿಲ್ಲೆಯಲ್ಲಿನ ಅಚಬಲ್ ಪ್ರಾಂತ್ಯದಲ್ಲಿ ಪೊಲೀಸ್ ಪೋಸ್ಟ್ ಅನ್ನು ಸುತ್ತುವರೆದು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.

ಸ್ಥಳೀಯ ಎಸ್.ಐ ಸೇರಿದಂತೆ ಆರು ಜನ ಪೊಲೀಸರು ಈ ದಾಳಿಯಲ್ಲಿ ಸಾವನ್ನಪ್ಪಿದ್ದರು. ಈ ದಾಳಿಗೆ ಸೂತ್ರಧಾರ, ಲಷ್ಕರ್ ಸಂಘಟನೆಯ ಅನಂತನಾಗ್ ಜಿಲ್ಲಾ ಕಮಾಂಡರ್ ಬಷೀರ್ ವಾನಿ ಜುಲೈ ಒಂದರಂದು ಎನ್ಕೌಂಟರಿನಲ್ಲಿ ಸಾವನ್ನಪ್ಪಿದ. ಈ ಹಿಂದೆ ಭಾರತೀಯ ಭದ್ರತಾ ಪಡೆಗಳು ಸುತ್ತುವರೆದಾಗ ಸುಮಾರು ಹನ್ನೆರಡು ಬಾರಿ ಚಾಣಾಕ್ಷತೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಬಷೀರ್ ವಾನೀ, ಕೊನೆಗೆ ಸೇನೆಯ ಬಲೆಯಲ್ಲಿ ಸಿಕ್ಕಿಬಿದ್ದ. ನೂರಾರು ಜನ ಸ್ಥಳೀಯರು ಎನ್ಕೌಂಟರ್ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಸೇನೆ ಮೇಲೆ ಕಲ್ಲೆಸೆದು ದಾಳಿಗೆ ಮುಂದಾದರು. ಆದರೂ 24 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿದ ಭದ್ರತಾ ಪಡೆಗಳು ಬಷೀರ್ ನನ್ನು ನೆಲಕ್ಕುರುಳಿಸಿದವು. ಲಷ್ಕರ್ ದಕ್ಷಿಣ ಕಾಶ್ಮೀರ ಡಿವಿಷನಲ್ ಕಮಾಂಡರ್ ಅಬು ದುಜಾನಾ ಇಂದು (ಮಂಗಳವಾರ) ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರಿನಲ್ಲಿ ಸತ್ತುಬಿದ್ದಿದ್ದಾನೆ. ದಕ್ಷಿಣ ಕಾಶ್ಮೀರದಲ್ಲಿ ಯುವಕರನ್ನು ಭಯೋತ್ಪಾದನೆ ಕಡೆ ಸೆಳೆದು ಲಷ್ಕರ್ ಸಂಘಟನೆಯಲ್ಲಿ ಸೇರಿಸುವುದರಲ್ಲಿ ಈತನದು ಪ್ರಮುಖ ಪಾತ್ರ.

ಜಿಡ್ಡು ಚರ್ಮಕ್ಕೆ 5 ಸಿಂಪಲ್ ಮನೆ ಮದ್ದು, ಪ್ರಯತ್ನಿಸಿ ನೋಡಿ

ಈ ಜನವರಿಯಿಂದ ಲೆಕ್ಕಕ್ಕೆ ತೆಗೆದುಕೊಂಡರೆ, ಏಳು ತಿಂಗಳುಗಳ ಅವಧಿಯಲ್ಲಿ ಸುಮಾರು 110 ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ. ಆದರೆ ಜೂನ್ ನಿಂದ ಭಾರತೀಯ ಸೇನೆಯ ತಂತ್ರ ಬದಲಾಗಿದೆ. ಉಗ್ರರ ನಾಯಕರ ಮೇಲೆ ಅವರು ವಿಶೇಷ ಗಮನ ಹರಿಸಿದ್ದಾರೆ. ಎ++ ಕ್ಯಾಟಗರಿಯಲ್ಲಿ ಹತ್ತರಿಂದ ಹದಿನೈದು ಲಕ್ಷ ಬಹುಮಾನವನ್ನು ಘೋಷಿಸಲಾಗಿರುವ ಉಗ್ರರ ನಾಯಕರನ್ನು ಟಾರ್ಗೆಟ್ ಮಾಡಿಕೊಂಡಿದೆ ಸೇನೆ. ಇವರೆಲ್ಲಾ ಯಾವ ಪ್ರದೇಶದಿಂದ ಯಾವ ಪ್ರದೇಶಕ್ಕೆ ಹೋಗುತ್ತಿದ್ದಾರೆ, ಯಾರನ್ನು ಭೇಟಿ ಮಾಡುತ್ತಿದ್ದಾರೆ, ಯಾವ ಸಮಯದಲ್ಲಿ ಬರುತ್ತಾರೆ, ಎಲ್ಲಿ ವಾಸ್ತವ್ಯ ಹೂಡುತ್ತಾರೆ ಎಂಬ ವಿಷಯಗಳನ್ನು ಮಾಹಿತಿದಾರರು, ಗುಪ್ತಚರ ಮೂಲಗಳು ಸಂಗ್ರಹಿಸಿ ಖಚಿತಪಡಿಸಿಕೊಂಡು ಬಲೆ ಹೆಣೆಯುತ್ತಿವೆ. ಅಗ್ರ ನಾಯಕರನ್ನು ಹೊಡೆದುರುಳಿಸಿದರೆ ನಾಯಕರಿಲ್ಲದ ಉಳಿದ ಉಗ್ರರು ಚೆಲ್ಲಾಪಿಲ್ಲಿಯಾಗುತ್ತಾರೆ ಅಥವಾ ಶರಣಾಗುತ್ತಾರೆ ಎಂಬುದು ಭಾರತೀಯ ಸೇನೆಯ ತಂತ್ರ. ಉಗ್ರರಿಗೆ ಸ್ಥಳೀಯ ಜನತೆಯ ಬೆಂಬಲವಿರುವುದು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿದೆ.

ವಾಟ್ಸಾಪ್, ಫೇಸ್ಬುಕ್ ನಂತಹ ಸಾಮಾಜಿಕ ತಾಣಗಳಿಂದ ಎಲ್ಲಿ ಎನ್ಕೌಂಟರ್ ನಡೆಯುತ್ತಿದೆ ಎಂಬ ಮಾಹಿತಿ ಕ್ಷಣಗಳಲ್ಲಿ ಅಲ್ಲಿನ ಯುವಕರಿಗೆ ತಿಳಿದು ಹೋಗುತ್ತದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ಎನ್ಕೌಂಟರ್ ನಡೆಯುತ್ತಿರುವ ಸ್ಥಳಕ್ಕೆ ಬಂದು ಭದ್ರತಾ ಪಡೆಗಳ ಮೇಲೆ ಕಲ್ಲೆಸೆತಕ್ಕೆ ಮುಂದಾಗುತ್ತಾರೆ. ಇವರನ್ನು ತಡೆಯುವ ಉದ್ದೇಶದಿಂದ ಎನ್ಕೌಂಟರ್ ನಡೆಯುತ್ತಿರುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಕಾಶ್ಮೀರ ಸರ್ಕಾರ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ. ಭಾರತೀಯ ಸೇನೆಯ ಕಣ್ತಪ್ಪಿಸಿ ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸ್ಥಳೀಯ ಯುವಕರು ಸಹಕರಿಸುತ್ತಿದ್ದಾರೆ. ಇಂತಹ ಘಟನೆಗಳಿಂದಾಗಿಯೇ ಗುಂಡಿನ ದಾಳಿಗಳಲ್ಲಿ ಸಾವನ್ನಪ್ಪುವ ನಾಗರಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿಯೇ ಸುಮಾರು 300 ವಾಟ್ಸಾಪ್ ಗ್ರೂಪ್ ಗಳ ಮೇಲೆ ಸ್ಥಳೀಯ ಪೊಲೀಸರು ನಿಗಾವಹಿಸಿದ್ದಾರೆ.

ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಪುರುಷರ ಮೇಲಿನ ರೇಪ್’ಗಳು!

ಸೇನೆಯ ಮೊದಲ ಪಟ್ಟಿಯಲ್ಲಿ ಇನ್ನು ಉಳಿದಿರುವ ಉಗ್ರರ ನಾಯಕರು ಇವರು…
1. ರಿಯಾಜ್ ನೈಕೂ ಅಲಿಯಾಸ್ ಜುಬೇರ್, 2. ಜಾಕೀರ್ ಮೂಸಾ, 3. ಜೀನತ್ ಉಲ್ ಇಸ್ಲಾಮ್, 4. ಅಬು ಹಮಸ್, 5. ಸದ್ದಾಂ ಪದ್ದಾರ್ ಅಲಿಯಾಸ್ ಜೈದ್, 6. ಶೌಕತ್ ತಕ್, 7. ಮಹ್ಮದ್ ಯಾಸಿನ್ ಇಟ್ಟೂ ಅಲಿಯಾಸ್ ಮಾನ್ಸೂನ್, 8. ವಸೀಂ ಅಲಿಯಾಸ್ ಒಸಾಮಾ, 9. ಅಲ್ತಾಫ್ ದಾರ್ ಅಲಿಯಾಸ್ ಕಚ್ರೂ

Loading...