ಗೋರಕ್ಷಕರ ದಾಳಿಗಳನ್ನು ತಡೆಯಲು ರಾಜ್ಯ, ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಸೂಚನೆ |News Mirchi

ಗೋರಕ್ಷಕರ ದಾಳಿಗಳನ್ನು ತಡೆಯಲು ರಾಜ್ಯ, ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಸೂಚನೆ

ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರಕ್ಕೆ ಮುಂದಾಗುವ ಗೋರಕ್ಷಕ ಗುಂಪುಗಳಿಗೆ ಕಡಿವಾಣ ಹಾಕುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಬುಧವಾರ ಸುಪ್ರೀಂ ಕೋರ್ಟ್ ಸೂಚಿಸಿದೆ.

ನ್ಯಾಯಾಲಯದ ಸಲಹೆಯನ್ನು ನಾಲ್ಕು ಬಿಜೆಪಿ ಆಡಳಿತದ ರಾಜ್ಯಗಳಾದ ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್ ಅಂಗೀಕರಿಸಿವೆ. ಕಾನೂನನ್ನು ಕೈಗೆತ್ತಿಕೊಳ್ಳುವ ಗೋರಕ್ಷಕ ಗುಂಪುಗಳಿಗೆ ಕಡಿವಾಣ ಹಾಕಲು ಡಿಎಸ್ಪಿ ದರ್ಜೆಯ ಅಧಿಕಾರಗಳನ್ನು ನೇಮಕ ಮಾಡಲು ಒಪ್ಪಿವೆ.

ಗೋರಕ್ಷಣೆಯ ಹೆಸರಿನಲ್ಲಿ ಗೋರಕ್ಷಕರು ಹಿಂಸೆಗಿಳಿಯುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮಹಾತ್ಮಾ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿಯವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಮಿತವ ರಾಯ್ ಮತ್ತು ಎ.ಎಂ.ಖಾನ್ವಿಲ್ಕರ್ ಅವರ ನ್ಯಾಯಪೀಠ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೂಚನೆಯನ್ನು ನೀಡಿದೆ.

ಸಮಸ್ಯೆಯನ್ನು ಅರ್ಜಿದಾರರು ರಾಜಕೀಯಗೊಳಿಸುವ ಪ್ರಯತ್ನವನ್ನು ತಡೆದ ನ್ಯಾಯಾಲಯ, ಇತ್ತೀಚೆಗೆ ಈದ್ ಹಬ್ಬದ ಸಂದರ್ಭದಲ್ಲಿ ಎಷ್ಟು ಪ್ರಾಣಿಗಳ ಹತ್ಯೆಯಾಗಿವೆ ನಿಮಗೆ ಗೊತ್ತೇ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಇಂತಹ ಸಂದರ್ಭಗಳಲ್ಲಿ ನಡೆಯುವ ಪ್ರಾಣಿಗಳ ವಧೆಗಳನ್ನೂ ಪ್ರಶ್ನಿಸಿ ಪಿಟೀಷನ್ ದಾಖಲಿಸುವಂತೆ ಅರ್ಜಿದಾರರಿಗೆ ಹೇಳಿದೆ.

ಗೋರಕ್ಷಕ ಗುಂಪುಗಳಿಗೆ ಕೇಂದ್ರ ಸರ್ಕಾರದ ಬೆಂಬಲ ವ್ಯಕ್ತಪಡಿಸಿಲ್ಲವಾದರೂ, ದೇಶಾದ್ಯಂತ ಗೋರಕ್ಷಕ ಗುಂಪುಗಳ ಹಾವಳಿ ಹೆಚ್ಚಾಗುತ್ತಿವೆ ಎಂದು ಅರ್ಜಿದಾರರ ಪರ ವಕೀಲ ಇಂದಿರಾ ಜೈಸಿಂಗ್ ಕೋರ್ಟ್ ಗಮನಕ್ಕೆ ತಂದರು. ಗೋರಕ್ಷಕ ಗುಂಪುಗಳ ದಾಳಿಗಳು ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಎಂದು ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳಲಾರದು ಎಂದು ಅರ್ಜಿದಾರ ಪರ ವಕೀಲರು ವಾದಿಸಿದರು. ರಾಜ್ಯಸರ್ಕಾರಗಳಿಗೆ ಗೋರಕ್ಷಕರ ಹಾವಳಿಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ 256ನೇ ಅಧಿನಿಯಮದ ಪ್ರಕಾರ ಆದೇಶಿಸುವ ಸಾಂವಿಧಾನಿಕ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ಇಂದಿರಾ ವಾದಿಸಿದರು.

ಅಧಿನಿಯಮ 256 ರ ಅಡಿಯಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು ಮತ್ತು ಭವಿಷ್ಯದಲ್ಲಿ ಇಂತಹ ಹಿಂಸಾಚಾರಗಳನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳನ್ನು ವಿವರಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

Loading...
loading...
error: Content is protected !!