ಮಂಡ್ಯ ವಿಧಾನಸಭಾ ಟಿಕೆಟ್ ಆಕಾಂಕ್ಷಿ ಸಿ.ಟಿ.ಮಂಜುನಾಥ್

ಮಂಡ್ಯ: ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಮುಖಂಡ, ನರೇಂದ್ರ ಮೋದಿ ವಿಚಾರ ಮಂಚ್ ರಾಜ್ಯ ಕಾರ್ಯದರ್ಶಿಯಾಗಿರುವ ಸಿ.ಟಿ.ಮಂಜುನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ತನ್ನ ಮೇಲೆ ಹಲವಾರು ಕೇಸುಗಳನ್ನು ಜಡಿದರೂ ಮಂಡ್ಯ ಜಿಲ್ಲೆಯ ರೈತರ ಸಮಸ್ಯೆಗಳು, ಕಾವೇರಿ, ಮೈಶುಗರ್, ಲವ್ ಜಿಹಾದ್ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಹಲವಾರು ಚಳುವಳಿಗಳನ್ನು ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆಗಳಿದ್ದು, ನನ್ನ ಶಕ್ತಿಗನುಗುಣವಾಗಿ ಸ್ಪಂದಿಸುತ್ತಾ ಬಂದಿದ್ದೇನೆ ಎಂದ ಅವರು, ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಿ ಕ್ಷೇತ್ರದ ಜನತೆಗೆ ಮತ್ತಷ್ಟು ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಲ್ಲಿ ಮಂಜುನಾಥ್ ಮನವಿ ಸಲ್ಲಿಸಿದ್ದಾರೆ. ರಾಜ್ಯಾಧ್ಯಕ್ಷರಿಂದ ಸಕಾರಾತ್ಮಕ ಭರವಸೆಯೂ ಬಂದಿದೆ ಎಂದು ಹೇಳಿರುವ ಅವರು, ವಲಸಿಗರ ಬದಲು ಪಕ್ಷಕ್ಕೆ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ನೀಡುವುದಾಗಿ ಇತ್ತೀಚೆಗೆ ಯಡಿಯೂರಪ್ಪನವರು ಹೇಳಿದ್ದನ್ನು ನೆನಪಿಸಿದರು. ಹೀಗಾಗಿ ಈ ಬಾರಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಈ ಪ್ರಾಮಾಣಿಕ ಕಾರ್ಯಕರ್ತನಿಗೆ ಅವಕಾಶ ಕಲ್ಪಿಸುತ್ತಾರೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ

ಒಂದು ವೇಳೆ ಟಿಕೆಟ್ ನಿರಾಕರಿಸಿದರೆ ನಿಮ್ಮ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ್, ನಮ್ಮಂತ ಪ್ರಾಮಾಣಿಕ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಪ್ರೋತ್ಸಾಹ ನೀಡುವ ಭರವಸೆ ಇದೆ. ಒಂದು ವೇಳೆ ಪಕ್ಷದ ನಾಯಕರು ಬೇರೆ ಯಾರಿಗೇ ಟಿಕೆಟ್ ನೀಡಿದರೂ ಸಹ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಈ ಹಿಂದೆ ಜಿಲ್ಲಾ ಬಿಜೆಪಿ ಘಟಕಕ್ಕೆ ವಲಸೆ ನಾಯಕರಿಗಳಿಗೆ ಮಣೆ ಹಾಕಲಾಗುತ್ತಿದ್ದು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನಗಳೂ ಕೇಳಿ ಬಂದಿದ್ದವು.

Get Latest updates on WhatsApp. Send ‘Subscribe’ to 8550851559