ಡಿಕೆ ರವಿ ಸಾವಿಗೆ ವೈಯುಕ್ತಿಕ ಕಾರಣ: ಸಿಬಿಐ ಅಂತಿಮ ವರದಿ ಸಿದ್ದ

ಬೆಂಗಳೂರು: ಐಎಎಸ್ ಅಧಿಕಾರಿ ಡಿಕೆ ರವಿ ಅನುಮಾನಾಸ್ಪದ ಸಾವಿನ ಕುರಿತಂತೆ ತನಿಖೆ ನಡೆಸುತ್ತಿದ್ದ ಸಿಬಿಐ, ಇದೀಗ ತನಿಖೆ ಪೂರ್ಣಗೊಳಿಸಿದ್ದು, 90 ಪುಟಗಳ ವರದಿಯನ್ನು ಸಿದ್ಧಪಡಿಸಿದೆ.

ವರದಿಯಲ್ಲಿ ಡಿಕೆ ರವಿ ವೈಯುಕ್ತಿಕ ಕಾರಣಗಳಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇತರರ ಕೈವಾಡವಿಲ್ಲ ಎಂದು ವರದಿಯಲ್ಲಿ ಸಿಬಿಐ ಹೇಳಿದೆ ಎನ್ನಲಾಗುತ್ತಿದೆ.

ಮಾರ್ಚ್ 16 2015 ರಂದು ತಮ್ಮ ಅಪಾರ್ಟ್ಮೆಂಟ್ ನಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಡಿಕೆ ರವಿ ಪತ್ತೆಯಾಗಿದ್ದರು. ಸಿಬಿಐ ಗೆ ಪ್ರಕರಣವನ್ನು ವಹಿಸುವಂತೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆದು ತೀವ್ರ ಒತ್ತಡ ಬಂದ ಕಾರಣ ಮಾರ್ಚ್23 ರಂದು ಸರ್ಕಾರ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿತ್ತು. 100 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿದ ಸಿಬಿಐ ತನಿಖೆ ಪೂರ್ಣಗೊಳಿಸಿದೆ.

ಇಂದು ಸಿಬಿಐ ಅಂತಿಮ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ಡಿಕೆ ರವಿ ಅವರ ಸಮಾಧಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಕೆ ರವಿ ತಾಯಿ ಮತ್ತು ಸಹೋದರ, ತನಿಖೆಯಲ್ಲಿ ಸಿಬಿಐ ಎಡವಿದೆ ಅನ್ನಿಸುತ್ತಿದೆ, ಈ ತನಿಖೆಯಿಂದ ಸತ್ಯಾಂಶ ಹೊರಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.