ಸರಬ್ಜಿತ್ ಸಹೋದರಿ ಬಿಜೆಪಿ ಸೇರ್ಪಡೆ – News Mirchi

ಸರಬ್ಜಿತ್ ಸಹೋದರಿ ಬಿಜೆಪಿ ಸೇರ್ಪಡೆ

ಮಾಡದ ತಪ್ಪಿಗೆ ಪಾಕ್ ಜೈಲು ಸೇರಿ ಅಲ್ಲಿಯೇ ಕೊನೆಯುಸಿರೆಳೆದ ಸರಬ್ಜಿತ್ ಸಿಂಗ್ ನ ಸಹೋದರಿ ದಲ್ಬೀರ್ ಕೌರ್ ಭಾನುವಾರ ಬಿಜೆಪಿಯಲ್ಲಿ ಸೇರ್ಪಡೆಯಾದರು. ಇವರ ಜೀವನವನ್ನು ಆಧರಿಸಿ ಬಾಲಿವುಡ್ ನಲ್ಲಿ ‘ಸರಬ್ಜಿತ್’ ಎಂಬ ಚಲನಚಿತ್ರವೂ ನಿರ್ಮಾಣವಾಗಿತ್ತು. ಅದರಲ್ಲಿ ರಣದೀಪ್ ಹುಡಾ ಸರಬ್ಜಿತ್ ಆಗಿ, ಐಶ್ವರ್ಯ ರೈ ಸರಬ್ಜಿತ್ ಸಹೋದರಿಯಾಗಿ ನಟಿಸಿದ್ದರು.

ಸಹೋದರನಿಗಾಗಿ ದಲ್ಬೀರ್ ಕೌರ್ ಎರಡು ದಶಕಗಳ ಕಾಲ ಇನ್ನಿಲ್ಲದ ಹೋರಾಟ ನಡೆಸಿದ್ದರು. ತಮ್ಮನನ್ನು ಪಾಜ್ ಜೈಲಿನಿಂದ ಬಿಡಿಸಲು ಹತ್ತು ಸಾವಿರ ಕಿ.ಮೀ ಪ್ರಯಾಣಿಸಿದ್ದರು. ಸಾವಿರಾರು ಮೇಣದ ಬತ್ತಿಗಳ ಪ್ರದರ್ಶನ, ನೂರಾರು ರ‌್ಯಾಲಿಗಳನ್ನು ನಡೆಸಿದರು. ತಮ್ಮನನ್ನು ಬಿಡಿಸಲು ಉಭಯ ದೇಶಗಳ 170 ಜನ ರಾಜಕೀಯ ಮುಖಂಡರನ್ನು ಆಕೆ ಭೇಟಿ ಮಾಡಿದ್ದರು.

ದಲ್ಬೀರ್ ಕೌರ್ ದು ಅಮೃತ್ ಸರ್ ಸಮೀಪದ ಭಿಕಿವಿಂಡ್ ಎನ್ನುವ ಕುಗ್ರಾಮ. ತಮ್ಮ ಸರಬ್ಜಿತ್ ಆಕಸ್ಮಿಕವಾಗಿ ದೇಶದ ಗಡಿ ದಾಟಿ ಪಾಕ್ ಭೂಭಾಗ ಪ್ರವೇಶಿಸಿದ್ದ. ತಾವು ಹುಡುಕುತ್ತಿದ್ದ ಭಾರತದ ಗೂಢಚಾರಿ ಈತನೇ ಎಂದು ತಪ್ಪಾಗಿ ತಿಳಿದು 1990 ರ ಆಗಸ್ಟ್ 28 ರಂದು ಪಾಕ್ ಸೇನೆ ಬಂಧಿಸಿತ್ತು. ಗೂಢಚಾರಿಕೆ ಆರೋಪಗಳ ಮೇಲೆ ಪ್ರಕರಣದ ವಿಚಾರಣೆ ನಡೆಸಿದ ಪಾಕ್ ಕೋರ್ಟ್ 1991 ರಲ್ಲಿ ಗಲ್ಲುಶಿಕ್ಷೆ ವಿಧಿಸಿ ಜೈಲಿನಲ್ಲಿಟ್ಟಿತು.

ವಿಷಯ ತಿಳಿದ ಸಹೋದರಿ ದಲ್ಬೀರ್ ಕೌರ್, ತಮ್ಮನ ಬಿಡುಗಡೆಗಾಗಿ ಅಂದಿನ ಭಾರತದ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್, ನಂತರ ಮನಮೋಹನ್ ಸಿಂಗ್ ರವರನ್ನೂ ಭೇಟಿ ಮಾಡಿ ತಮ್ಮನನ್ನು ಬಿಡಿಸುವಂತೆ ಬೇಡಿಕೊಂಡಿದ್ದಳು. ಅಂದಿನ ಪಾಕ್ ಮುಖ್ಯಸ್ಥ ಮುಷರಫ್ ರವರನ್ನೂ ಭೇಟಿ ಮಾಡಿ ತಮ್ಮನ ಬಿಡುಗಡೆಗಾಗಿ ಒತ್ತಾಯಿಸಿದ್ದಳು. ಗಲ್ಲು ಶಿಕ್ಷೆ ಜಾರಿಯಾಗದ ಕಾರಣ ಬಿಡುಗಡೆ ಮಾಡಿಸುವುದಾಗಿ ಮುಷರಫ್ ಭರವಸೆ ನೀಡಿದ್ದರು. 2011 ರಲ್ಲಿ ಪಾಕ್ ಜೈಲಿನಲ್ಲಿ ಕೊಳೆಯುತ್ತಿದ್ದ ತಮ್ಮನನ್ನು ಭೇಟಿ ಮಾಡಿ ರಾಖಿ ಕಟ್ಟಿ, ಹೇಗಾದರೂ ಮಾಡಿ ನಿನ್ನನ್ನು ಬಿಡಿಸಿಕೊಂಡು ಹೋಗುತ್ತೇನೆ ತಮ್ಮಾ ಎಂದು ಹೇಳಿಬಂದಿದ್ದಳು.

ಆದರೆ 2013 ರಲ್ಲಿ ಏಪ್ರಿಲ್26 ರಂದು ಸರಬ್‌ಜಿತ್ ಸಹ ಖೈದಿಗಳು ಆತನನ್ನು ಜೈಲಿನಲ್ಲೇ ಕೊಂದು ಬಿಟ್ಟರು. ಸರಬ್ಜಿತ್ ನನ್ನು ಬಿಡುಗಡೆ ಮಾಡಿದರೆ ಅಮಾಯಕನನ್ನು ಸುಮ್ಮನೆ ಶಿಕ್ಷಿಸಿದರು ಎಂಬ ಆರೋಪ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪಾಕ್ ಸೇನೆಯ ಅಧಿಕಾರಿಗಳೇ ಸರಬ್ಜಿತ್ ನನ್ನು ಕೊಲ್ಲಿಸಿದರು ಎಂಬ ಆರೋಪಗಳಿವೆ.

Click for More Interesting News

Loading...

Leave a Reply

Your email address will not be published.

error: Content is protected !!